ತುಮಕೂರು: ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಸ್ವಂತ ತಂದೆಯನ್ನೇ ಮಗನೊಬ್ಬ ಕೊಲೆ ಮಾಡಿರುವ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾರುತಿ ನಗರದ ಸಣ್ಣಯ್ಯ (65) ಕೊಲೆಯಾದವರಾಗಿದ್ದು, ಆರೋಪಿ ಮಗ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಸಣ್ಣಯ್ಯ ಅವರಿಗೆ ಮೂರು ಜನ ಮಕ್ಕಳು. ಮೂರನೇ ಮಗನಿಗೆ ಈಗಾಗಲೇ ಮದುವೆ ಮಾಡಲಾಗಿದ್ದು, ಎರಡನೇ ಮಗ ವೆಂಕಟೇಶ್, ತನಗೆ ಮದುವೆ ಮಾಡುವಂತೆ ಕುಡಿದು ಬಂದು ಪೀಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಏಕಾಏಕಿ ಬಂದು ತಂದೆ ಸಣ್ಣಯ್ಯ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ಆಗಾಗ ಮನೆಗೆ ಬಂದು ಮದುವೆ ಮಾಡುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಕಳೆದ ಆರು ತಿಂಗಳ ಹಿಂದೆ ಮನೆಗೆ ಬಂದು ಗಲಾಟೆ ಮಾಡಿ ತಂದೆಯನ್ನು ಥಳಿಸಿ ಬೆಂಗಳೂರಿಗೆ ವಾಪಸ್ ಹೋಗಿದ್ದನಂತೆ.
ಲಾಕ್ಡೌನ್ ಅನ್ಲಾಕ್ ಆದ ನಂತರ ಮತ್ತೆ ಊರಿಗೆ ಬಂದಿದ್ದ ವೆಂಕಟೇಶ್, ಪ್ರತಿದಿನ ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಇದೀಗ ತಂದೆಯನ್ನೇ ಕೊಲೆ ಮಾಡಿದ್ದು, ಈ ಕುರಿತು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.