ತುಮಕೂರು: ಕಲ್ಪತರು ನಾಡು ತುಮಕೂರಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ, ಇನ್ನೊಂದೆಡೆ ಹೇಮಾವತಿ ನದಿ ನೀರು ಕೂಡ ಬಹುತೇಕ ಜಿಲ್ಲೆಯ ಎಲ್ಲಾ ಕೆರೆಕಟ್ಟೆಗಳಲ್ಲಿ ತುಂಬಿ ತುಳುಕುತ್ತಿದೆ. ಇದರಿಂದಾಗಿ ಜಿಲ್ಲೆಯ ಸಾಕಷ್ಟು ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ಇದು ರೈತಾಪಿ ವರ್ಗದವರಿಗೆ ಸಂತಸ ಮೂಡಿಸಿದೆ.
ಆದರೆ ಕೆರೆಗಳಿಗೆ ಈಜಲು ತೆರಳಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿರುವ ಯುವ ಸಮೂಹದ ಸಂಖ್ಯೆಯೂ ಏರುತ್ತಿದೆ. ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಹೀಗಾಗಿ ಯುವಕರು ಕೆರೆಗಳಲ್ಲಿ ಈಜಲು ತೆರಳಿ ಸಾವನಪ್ಪುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ.
ಜಿಲ್ಲೆಯಲ್ಲಿ ಕಳೆದ 9 ತಿಂಗಳಿನಿಂದ ಇದುವರೆಗೂ 44 ಮಂದಿ ಕೆರೆಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಅಕ್ಟೋಬರ್ 1ರಿಂದ ನವೆಂಬರ್ 9ರವರೆಗೆ ಬರೋಬ್ಬರಿ 18 ಮಂದಿ ಪ್ರಾಣ ತೆತ್ತಿದ್ದಾರೆ. ತುಮಕೂರು ತಾಲೂಕಿನಲ್ಲಿ ಐವರು, ತಿಪಟೂರು, ಶಿರಾ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲೂಕಿನಲ್ಲಿ ತಲಾ ಇಬ್ಬರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ತುರುವೇಕೆರೆ ಮತ್ತು ಕುಣಿಗಲ್ ತಾಲೂಕಿನಲ್ಲಿ ತಲಾ ಒಬ್ಬರು ಹಾಗೂ ಗುಬ್ಬಿ ತಾಲೂಕಿನಲ್ಲಿ ಮೂವರು ಪ್ರಾಣ ತೆತ್ತಿದ್ದಾರೆ. ಹೀಗೆ ಮೃತಪಟ್ಟವರೆಲ್ಲರೂ 18 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು ಆಗಿದ್ದಾರೆ ಎಂಬುದು ದುರಂತದ ವಿಷಯವಾಗಿದೆ. ಇವರೆಲ್ಲರು ಕೆರೆಗಳ ಬಳಿ ಈಜಲು ತೆರಳಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಕೊರೊನಾ ಸೋಂಕು ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ಹೋಗದ ವಿದ್ಯಾರ್ಥಿಗಳು ಈ ರೀತಿ ಕೆರೆಗಳ ಬಳಿ ಗ್ರಾಮೀಣ ಭಾಗದಲ್ಲಿ ಆಟವಾಡಲು ಹೋಗಿ ಸಾವನ್ನಪ್ಪುತ್ತಿದ್ದಾರೆ. ಈ ಕುರಿತಂತೆ ಜನಜಾಗೃತಿ ಮೂಡಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸಿಇಒ ಶುಭ ಕಲ್ಯಾಣ.