ತುಮಕೂರು: ದೇಶಾದ್ಯಂತ ಏಕಕಾಲದಲ್ಲಿ ನಡೆದ ವಿಶ್ವದಾಖಲೆಯ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಾಗಾರದ ಭಾಗವಾಗಿ ಜಿಲ್ಲೆಯ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಠದ ಸುಮಾರು 10 ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಅಂತಾರಾಷ್ಟ್ರೀಯ ಯೋಗ ಸಂಸ್ಥೆಯ ನಿರಂಜನಮೂರ್ತಿ, ಸೂರ್ಯ ನಮಸ್ಕಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಿಶೇಷವಾಗಿ ಮೂರು ದಿನಗಳಿಂದ ಮಕ್ಕಳು ಸೂರ್ಯ ನಮಸ್ಕಾರ ಅಭ್ಯಾಸ ಮಾಡಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, 'ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ದೊಡ್ಡ ಸಾಧನ. ಇಡೀ ವಿಶ್ವಕ್ಕೆ ನಮ್ಮ ದೇಶದ ದೊಡ್ಡ ಕೊಡುಗೆ ಯೋಗ. ಯೋಗ ಈಗ ವಿದೇಶಗಳಲ್ಲೂ ಪ್ರಸಿದ್ದಿಯಾಗಿದ್ದು, ಪ್ರತಿಯೊಬ್ಬರೂ ಯೋಗ ಮಾಡುವತ್ತ ಚಿತ್ತ ಹರಿಸಿದ್ದಾರೆ' ಎಂದರು.
'ಚಿಕ್ಕಂದಿನಿಂದಲೂ ಯೋಗಾಭ್ಯಾಸ ಮಾಡಿದರೆ ಮಾನಸಿಕ ಸ್ಥಿತಿ ಸಮಚಿತ್ತದಿಂದ ಇರುತ್ತದೆ. ಜತೆಗೆ ಆತ್ಮತೃಪ್ತಿ, ಸಂತೋಷ, ಸುಖ, ನೆಮ್ಮದಿಯೂ ಪ್ರಾಪ್ತಿಯಾಗುತ್ತದೆ. ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮತೋಲನ ಕಾಪಾಡಲು ಸಹ ಯೋಗ ಸಹಕಾರಿ.
ಸೂರ್ಯನಮಸ್ಕಾರದಲ್ಲಿ 12 ಆಸನಗಳಿದ್ದು, ಒಂದೊಂದು ಆಸನವೂ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದೆ. ಧ್ಯಾನ, ಪ್ರಾಣಾಯಾಮ ಮನುಷ್ಯನ ಉಸಿರಾಟವನ್ನು ಸರಾಗಗೊಳಿಸುತ್ತವೆ' ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರಿನ ಶಿವಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಂಬಳಕ್ಕೂ ಬಾಧಿಸಿದ ನೈಟ್ ಕರ್ಫ್ಯೂ: ರಾತ್ರಿ ಓಟದ ಕೋಣಗಳಿಗೆ ರೆಸ್ಟ್, ಬೆಳಗ್ಗೆಯಿಂದ ರೇಸ್