ತುಮಕೂರು : ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಿತು.
ಖಾಸಗಿ ಅನುದಾನ ರಹಿತ ಶಾಲಾ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಆರೋಗ್ಯ ವಿಮೆ ನೀಡಬೇಕು, ಶಾಲೆಗಳು ಪುನರ್ ಆರಂಭವಾಗುವವರೆಗೂ ಖಾಸಗಿ ಅನುದಾನ ರಹಿತ ಶಾಲಾ ಸಿಬ್ಬಂದಿಗೆ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿ ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು. 2019-20ನೇ ಸಾಲಿನ ಬಾಕಿ ಶುಲ್ಕವನ್ನು ಪಾವತಿಸುವಂತೆ ಪೋಷಕರಿಗೆ ಆದೇಶ ನೀಡಬೇಕು. ಶಾಲೆಗಳ ಆಡಳಿತ ಮಂಡಳಿಗೆ ಶಿಕ್ಷಕರ ಮತ್ತು ಶಾಲೆಯ ಹಿತರಕ್ಷಣೆಗೆ 20 ರಿಂದ 30 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲಾ ಖಾಸಗಿ ಅನುದಾನಿತ ಶಾಲೆಗಳಿಗೆ 2021-22ನೇ ಶೈಕ್ಷಣಿಕ ವರ್ಷದ ಮಾನ್ಯತೆ ನವೀಕರಣದಲ್ಲಿ ವಿನಾಯಿತಿ ನೀಡಬೇಕು. 2020-21ನೇ ಸಾಲಿಗೆ ಪಠ್ಯಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ವಿತರಿಸಬೇಕು. ಖಾಸಗಿ ಅನುದಾನರಹಿತ ಶಾಲೆಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ತಡೆಯಲು ಸೂಕ್ತ ಕಾಯ್ದೆ ರೂಪಿಸಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಮೌನ ಪ್ರತಿಭಟನೆ ನಡೆಸಲಾಯಿತು.
ನಂತರ ಮಾತನಾಡಿದ ಡಾ. ಹಾಲನೂರು ಎಸ್. ಲೇಪಾಕ್ಷ, ಕೊರೊನಾ ಲಾಕ್ಡೌನ್ನಿಂದಾಗಿ ಶಿಕ್ಷಕರು ಬೀದಿ ಪಾಲಾಗುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಕಳೆದ ಶೈಕ್ಷಣಿಕ ವರ್ಷದ ಶುಲ್ಕವನ್ನು ಪೂರ್ಣವಾಗಿ ನೀಡಿಲ್ಲ. ಇದರ ನಡುವೆ ಸರ್ಕಾರ ಆರ್‌ಟಿಇನಿಂದ ಬರಬೇಕಾದ ಹಣ ಈವರೆಗೂ ಶಾಲೆಗಳಿಗೆ ನೀಡಿಲ್ಲ. ಈಗಾಗಲೇ ರಾಜ್ಯದಲ್ಲಿ 8 ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಈವರೆಗೂ ಅವರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ ಎಂದರು.