ತುಮಕೂರು: ಕೊರೊನಾ ಬಿಕ್ಕಟ್ಟಿನ ನಡುವೆ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ. ಈ ನಡುವೆ ಮಧುಗಿರಿ ತಾಲೂಕಿನ ಶಾಲೆಯೊಂದರ ಶಿಕ್ಷಕರು ಮಾತ್ರ ಕೈಕಟ್ಟಿ ಕೂರದೆ ಶಾಲಾ ಕಟ್ಟಡದ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಮಧುಗಿರಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮೂವರು ಶಿಕ್ಷಕರು ಶಾಲಾ ಕಟ್ಟಡಕ್ಕೆ ಬಣ್ಣ ಬಳಿದು ವಾತಾವರಣವನ್ನು ಸುಸ್ಥಿತಿಯಲ್ಲಿಡುತ್ತಿದ್ದಾರೆ.
ಶಾಲಾ ಗೋಡೆಗಳು, ಕೊಠಡಿಗಳು, ಶಾಲಾ ಕಾಂಪೌಂಡ್, ಗೇಟ್, ಅಕ್ಷರ ದಾಸೋಹ ಕೊಠಡಿ ಹೀಗೆ ಶಾಲಾ ಆವರಣವನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ಸುಸಜ್ಜಿತವಾಗಿ ಇರಿಸಿ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ.
ಶಾಲೆಯ ಮುಖ್ಯಶಿಕ್ಷಕಿ ಕೆಂಪರಾಜಮ್ಮ, ಶಿಕ್ಷಕರಾದ ಪಾಪಣ್ಣ, ಶ್ರೀನಿವಾಸ್ ಮತ್ತು ಸಿಆರ್ ಪಿ ನವೀನ್ ಕುಮಾರ್ ಶಾಲೆಯನ್ನು ವಿವಿಧ ನಮೂನೆಯ ವರ್ಣಗಳಿಂದ ಕಂಗೊಳಿಸುವಂತೆ ಮಾಡುತ್ತಿದ್ದಾರೆ.