ತುಮಕೂರು: ಕೇಂದ್ರ ಸರ್ಕಾರದ ಮಹತ್ವದ 'ಸ್ವಚ್ಛ ಸರ್ವೇಕ್ಷಣ್ 2020' ಅಭಿಯಾನದಲ್ಲಿ ತುಮಕೂರು ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಮಹಾನಗರ ಪಾಲಿಕೆಗಳ ಹಂತದಲ್ಲಿ 48ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ 72ನೇ ಸ್ಥಾನ ಪಡೆದಿದೆ.
ಕಳೆದ ಬಾರಿಯ 2019ರ ಸಮೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ 231ನೇ ಸ್ಥಾನ ಪಡೆದಿತ್ತು. ಒಟ್ಟು 6 ಸಾವಿರ ಅಂಕಗಳಿಗೆ ತುಮಕೂರು ಮಹಾನಗರ ಪಾಲಿಕೆಯು 3863.66 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ ಹಾಗೂ ಮೊದಲ ಸ್ಥಾನವನ್ನು ಮೈಸೂರು ಮಹಾನಗರ ಪಾಲಿಕೆ ಪಡೆದುಕೊಂಡಿದೆ.
ತುಮಕೂರು ಈ ಬಾರಿ ಎರಡನೇ ಸ್ಥಾನ ಪಡೆಯಲು ಹಿಂದಿನ ಪಾಲಿಕೆ ಆಯುಕ್ತ ಭೂಬಾಲನ್ ಅವರ ಮಾರ್ಗದರ್ಶನ ಹಾಗೂ ಅವರು ನೀಡಿದ ಗುರಿಗಳನ್ನು ಅಧಿಕಾರಿಗಳು ಪಾಲನೆ ಮಾಡಿರುವುದು ಕಾರಣವಾಗಿದೆ ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.
ಪ್ರಮುಖವಾಗಿ ಪಾಲಿಕೆಯ ಕೆಲಸ ಕಾರ್ಯಗಳ ದಾಖಲಾತಿ, ಮಾಹಿತಿ ಸಂಗ್ರಹಣೆ, ಕೆಲಸಗಳ ಮೇಲೆ ನಿಗಾ ವಹಿಸುವಿಕೆ ಹಾಗೂ ನಗರದ ನಾಗರಿಕರ ಸಲಹೆಗಳನ್ನು ಪಡೆಯುವ ಮೂಲಕ ಈ ಕಾರ್ಯ ಸಾಧನೆ ಸಾಧ್ಯವಾಗಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಮಹತ್ವದ ಕೆಲಸ ಕಾರ್ಯಗಳು ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಆ ಎಲ್ಲಾ ಕೆಲಸಗಳು ಪೂರ್ಣಗೊಂಡ ನಂತರ ಮುಂದಿನ ಬಾರಿಯ 'ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ತುಮಕೂರು ಮಹಾನಗರ ಪಾಲಿಕೆಯು ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸ್ಥಾನ ಪಡೆಯಲಿದೆ ಎಂದು ಪಾಲಿಕೆ ಆರೋಗ್ಯಧಿಕಾರಿ ಡಾ. ನಾಗೇಶ್ ಕುಮಾರ್ ಹೇಳಿದರು.
ಈ ಬಾರಿ ರಾಜ್ಯದಲ್ಲಿ ಸ್ವಚ್ಚ ಸರ್ವೇಕ್ಷಣ್ ಅಭಿಯಾನದಲ್ಲಿ ಎರಡನೇ ಸ್ಥಾನ ಪಡೆದಿರುವುದಕ್ಕೆ ಪಾಲಿಕೆ ಮೇಯರ್ ಫರೀದಾ ಬೇಗಂ, ಸೇರಿದಂತೆ ಎಲ್ಲಾ ಪಾಲಿಕೆ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ನೂತನ ಆಯುಕ್ತೆ ರೇಣುಕಾ ಸಹ ಮುಂದಿನ ದಿನಗಳಲ್ಲಿ ಪಾಲಿಕೆ ಮತ್ತಷ್ಟು ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.