ತುಮಕೂರು: ಕೋವಿಡ್-19 ಸೋಂಕಿನ ಭೀತಿಯ ನಡುವೆ ತೆರಿಗೆ ಹೆಚ್ಚಿಸುವ ಕ್ರಮಕ್ಕೆ ಪಾಲಿಕೆ ಸದಸ್ಯರು ಒಪ್ಪದಿದ್ದರೆ ಸೂಪರ್ ಸೀಡ್ ಆಗುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ವಿಚಾರ ತುಮಕೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಪಾಲಿಕೆ ಹಿರಿಯ ಸದಸ್ಯ ಸೈಯದ್ ನಯಾಸ್, ಇತ್ತೀಚೆಗೆ ನಡೆದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಭೀತಿಯ ನಡುವೆ ತೆರಿಗೆ ಹೆಚ್ಚಳ ಮಾಡಬಾರದು. ಇದರಿಂದ ಸಾರ್ವಜನಿಕರ ಮೇಲೆ ಸಾಕಷ್ಟು ಒತ್ತಡ ಬೀಳಲಿದೆ ಎಂದು ಹೇಳಿದೆ. ಆದರೆ, ಇದಕ್ಕೆ ಪಾಲಿಕೆಯ ಅಧಿಕಾರಿಗಳು ತೆರಿಗೆ ಹೆಚ್ಚಳ ಮಾಡಲು ಸದಸ್ಯರು ಒಪ್ಪದಿದ್ದರೆ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಿದೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಪಾಲಿಕೆಯ ಸದಸ್ಯರು ಪಾಲಿಕೆಯ ಅಧಿಕಾರಿ ನಾಗರಾಜ್ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ಅಧಿಕಾರಿ ನಾಗರಾಜ್ ಪಾಲಿಕೆ ಮೇಯರ್ ಬಳಿ ತೆರಳಿ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಕಿವಿಗೊಡದ ಮೇಯರ್ ಫರೀದಾ ಬೇಗಂ ಅವರು ಸೂಪರ್ ಸೀಡ್ ಕುರಿತು ವಿಷಯವನ್ನು ಹಬ್ಬಿಸುತ್ತಿರುವ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಕುರಿತು ಮುಂದಿನ ಸಭೆಯಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು.