ತುಮಕೂರು: ನಗರದ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಾಂಧವ್ಯ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿಯಾಯಿತು. ವರ್ಗಾವಣೆಗೊಂಡ ಶಿಕ್ಷಕರನ್ನು ಕಂಡು ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ.
ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಡಾ. ಎಸ್. ಕೃಷ್ಣಪ್ಪ ಅವರು ಗುಬ್ಬಿ ತಾ. ಅಂಕಸಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದಾರೆ. ಅವರನ್ನು ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ 'ನಮ್ಮ ಶಾಲೆಯನ್ನು ಬಿಟ್ಟೋಗಬೇಡಿ ಸರ್.. ಎಂದು ಶಿಕ್ಷಕರನ್ನು ತಬ್ಬಿಕೊಂಡು ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ಶಾಲೆಯ ಸಹೋದ್ಯೋಗಿಗಳು ಸಹ ಕಣ್ಣೀರು ಹಾಕಿದರು.
ನಿರಂತರ 22 ವರ್ಷಗಳಿಂದ ನಗರದ ಎಂಪ್ರೆಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಡಾ ಕೃಷ್ಣಪ್ಪ ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದರು. ಇತ್ತೀಚೆಗಷ್ಟೇ ಹಂಪಿ ವಿವಿಯಿಂದ ಪಿಹೆಚ್ಡಿ ಪದವಿ ಪಡೆದಿದ್ದ ಅವರು ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕರೆಂದು ಇಲಾಖೆಯಲ್ಲಿ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ : ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಖಂಡನೆ.. ಶಾಲೆಗೆ ಬೀಗ ಜಡಿದು ಮಕ್ಕಳು - ಗ್ರಾಮಸ್ಥರಿಂದ ಪ್ರತಿಭಟನೆ