ತುಮಕೂರು: ಮನಸ್ಸಿದ್ದರೆ ಎಂತಹ ಕಾರ್ಯವನ್ನಾದರೂ ಸಲೀಸಾಗಿ ನಿರ್ವಹಿಸಬಹುದು ಎಂಬ ಆಶಾವಾದದ ಮಾತುಗಳು ಆಗಾಗ ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಇದಕ್ಕೊಂದು ಸೂಕ್ತ ನಿದರ್ಶನವೆಂಬಂತೆ ಕಲ್ಪತರು ನಾಡಿನ ನಾರಿಯೊಬ್ಬಳು ತಂದೆಯನ್ನು ಕಳೆದುಕೊಂಡಿರುವ ನೋವಿನ ನಡುವೆಯೇ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಲೇ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾಳೆ. ಹಾಗಾದ್ರೆ ಬನ್ನಿ, ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿ ಸವಾಲನ್ನು ಸ್ವೀಕರಿಸಿ ಮಾದರಿಯಾಗಿರುವ ನಾರಿಯ ಬದುಕನ್ನು ನೋಡಿ ಬರೋಣ.
ತುಮಕೂರಿನ ಶ್ರೀರಾಮ ನಗರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಲಾವಣ್ಯ, ನಗರದ ಎಸ್ ಐ ಟಿ ಕಾಲೇಜಿನಲ್ಲಿ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವುದರ ಜೊತೆಗೆ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾಳೆ. ಇದಕ್ಕಾಗಿ ನಿತ್ಯವೂ ಮನೆ ಮನೆಗೆ ಪೇಪರ್ ಹಾಕಿ, ಒಂದಿಷ್ಟು ಹಣ ಸಂಪಾದನೆ ಮಾಡಿ, ತನ್ನ ಮನೆಯ ಖರ್ಚನ್ನೂ ನಿಭಾಯಿಸುವುದರೊಂದಿಗೆ ವ್ಯಾಸಂಗವನ್ನೂ ಮಾಡುತ್ತಿದ್ದಾಳೆ.
ಕಳೆದ 30 ವರ್ಷದಿಂದ ಪೇಪರ್ ಏಜೆನ್ಸಿ ನಡೆಸುತ್ತಿದ್ದ ಈಕೆಯ ತಂದೆ ನರಸಿಂಗರಾವ್ ಹೃದಯಾಘಾತದಿಂದ ಅಸುನೀಗಿದ ನಂತರ ಅನಿವಾರ್ಯವಾಗಿಯೇ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಲಾವಣ್ಯ, ತನ್ನ ತಂದೆಯ ವೃತ್ತಿಯನ್ನೇ ಮುಂದುವರೆಸಿದ್ದಾಳೆ. ಇದೀಗ ತನ್ನ ತಾಯಿಯ ಸಾಥ್ ಪಡೆದು ಕಾಲೇಜು ಕಲಿಯುತ್ತ, ತಾಯಿ, ಸಹೋದರ ಮತ್ತು ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದಾಳೆ.
ಪ್ರತಿದಿನವೂ ದ್ವಿಚಕ್ರ ವಾಹನದ ಮೂಲಕ ಪೇಪರ್ ಹಾಕುವ ಲಾವಣ್ಯ, ನಂತರ ಕಾಲೇಜಿಗೆ ಹೋಗಿ ಸಂಜೆ 4 ಗಂಟೆಗೆ ಹಿಂದಿರುಗುತ್ತಾಳೆ. ಹೀಗೆ ಮನೆಗೆ ಬಂದವಳೇ ಪುನಃ ರಾತ್ರಿ 8 ಗಂಟೆವರೆಗೂ ಪೇಪರ್ ಕಲೆಕ್ಷನ್ ಮಾಡುತ್ತಾಳೆ. ಇಷ್ಟೆಲ್ಲಾ ಕೆಲಸಗಳ ನಡುವೆಯೂ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಓದುವ ಆಕೆ, ದಣಿವಿರದೆ ದುಡಿಯುತ್ತಾ ಇತರರಿಗೆ ಮಾದರಿ ಹೆಣ್ಣಾಗಿದ್ದಾಳೆ.