ತುಮಕೂರು : ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್ ಮೇಲೆ ಕಿಡಿಗೇಡಿಯೊಬ್ಬ ಕಲ್ಲೆಸೆದ ಪರಿಣಾಮ ತಲೆಗೆ ತೀವ್ರ ಗಾಯವಾಗಿರುವ ಘಟನೆ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಭೈರೇನಹಳ್ಳಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಪರಮೇಶ್ವರ್ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿಕೊಂಡು ಸಂಭ್ರಮಿಸುತ್ತಿದ್ದರು. ಅಲ್ಲದೇ ಈ ವೇಳೆ ಅವರ ಮೇಲೆ ಜೆಸಿಬಿಯಿಂದ ಹೂವಿನ ಮಳೆಯನ್ನೇ ಸುರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಗುಂಪಿನಿಂದ ತೂರಿಬಂದ ಕಲ್ಲು ಪರಮೇಶ್ವರ್ ಅವರ ತಲೆಗೆ ತಗುಲಿದೆ.
ಇದರಿಂದ ತೀವ್ರ ಗಾಯಗೊಂಡ ಪರಮೇಶ್ವರ್ ಅವರನ್ನು ತಕ್ಷಣ ಅಕಿರಾಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ತಲೆಗೆ ಪೆಟ್ಟು ಬಿದ್ದ ಕಾರಣ ಅವರ ಬಟ್ಟೆಯೂ ಸಹ ರಕ್ತಮಯವಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಲ್ಲಿಂದ ಬಳಿಕ ಪರಮೇಶ್ವರ್ ತುಮಕೂರಿನ ಹೊರವಲಯದಲ್ಲಿರುವ ಸಿದ್ದಾರ್ಥ ನಗರದ ತಮ್ಮ ಮನೆಗೆ ಬಂದಿದ್ಧಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ವೈದ್ಯ ಡಾ.ಚಂದ್ರಶೇಖರ್, ಪರಮೇಶ್ವರ್ ಸಿದ್ದಾರ್ಥ ನಗರದ ಮನೆಗೆ ಶಿಫ್ಟ್ ಆಗಿದ್ದು, ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ನ್ಯುರಾಲಾಜಿ ವೈದ್ಯರಿಂದ ಚಿಕಿತ್ಸೆ ಮುಂದುವರೆಯಲಿದೆ. ತಲೆಗೆ ಆಳವಾದ ಗಾಯವಾಗಿರುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಚುನಾವಣೆ ಪ್ರಚಾರ ಆರಂಭವಾದ ಬಳಿಕ ಪರಮೇಶ್ವರ್ ಮೇಲೆ ಎರಡು ಬಾರಿ ಕಲ್ಲೆಸೆಯಲು ಯತ್ನಿಸಲಾಗಿದೆ. ಈ ಘಟನೆ ಎರಡನೇ ಬಾರಿಯದ್ದಾಗಿದೆ. ಈ ಹಿಂದೆ ಕೊರಟಗೆರೆ ಪಟ್ಟಣದಾದ್ಯಂತ ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ತೆರಳುತ್ತಿದ್ದ ವೇಳೆ ಕಿಡಿಗೇಡಿಯೊಬ್ಬ ಕಲ್ಲು ಎಸೆದಿದ್ದ. ಆಗ ಅದೃಷ್ಟವಶಾತ್ ಅವರಿಗೆ ಪೆಟ್ಟಾಗಿರಲಿಲ್ಲ. ಆದರೆ ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗೆ ತೀವ್ರ ಗಾಯವಾಗಿತ್ತು.
ಇದನ್ನೂ ಓದಿ: ಮೋದಿಯವರಿಗೆ ಎಷ್ಟು ಟೀಕಿಸುತ್ತಿರೋ ಅಷ್ಟು ಮತ ಬಿಜೆಪಿಗೆ ಬರುತ್ತೆ: ಖರ್ಗೆ ವಿರುದ್ಧ ಅಮಿತ್ ಶಾ ಕಿಡಿ