ತುಮಕೂರು: ಸೋಂಕು ಕಾಣಿಸಿಕೊಂಡರೆ ಯಾವುದಾದರೂ ಕೋವಿಡ್ ಕೇರ್ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ಪಡೆದು ಹುಷಾರಾಗಿರಿ, ಮಾನವ ಜನ್ಮ ಉಳಿಯಬೇಕಿದೆ. ಸೋಂಕಿತರು ಕಂಡು ಬಂದ ತಕ್ಷಣ ಕೋವಿಡ್ ಕೇರ್ ಕೇಂದ್ರಗಳಿಗೆ ಅವರನ್ನು ಕರೆದು ತನ್ನಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಜನರಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ ಸೋಂಕು ಎಂಬ ಅರಿವಿಲ್ಲದೆ ತೊಳಲಾಡುತ್ತಿರುವವರ ವಿಷಯ ತಿಳಿದ ತಕ್ಷಣ ಅವರ ಮನವೊಲಿಸಿ ಕೋವಿಡ್ ಕೇಂದ್ರಗಳಿಗೆ ಕರೆತನ್ನಿ. ಅವರನ್ನು ಸುಮಾರು 7 ದಿನಗಳ ಕಾಲ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಅಕಸ್ಮಾತ್ ಕೆಲ ಸೋಂಕಿತರು ಕೋವಿಡ್ ಕೆಂದ್ರಗಳಿಗೆ ಬರದಿದ್ದರೆ ನನಗೆ ತಿಳಿಸಿ, ನಾನು ಬಂದು ಅವರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡುತ್ತೇನೆ. ಮೊದಲ ಕೊರೊನಾ ಸೋಂಕಿನ ಅಲೆಯಲ್ಲಿ ಸೋಂಕಿತರನ್ನು ಕೋವಿಡ್ ಕೆಂದ್ರಗಳಿಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಈ ಬಾರಿ ಜನ ಎಚ್ಚರಿಕೆ ವಹಿಸಲಿಲ್ಲ, ಬದಲಾಗಿ ಅನೇಕ ಮದುವೆ, ಹಬ್ಬದ ಕಾರ್ಯಕ್ರಮಗಳಲ್ಲಿ ಯಾವುದೇ ಮುಂಜಾಗ್ರತೆ ವಹಿಸದೆ ಪಾಲ್ಗೊಂಡಿದ್ದಾರೆ. ಹೀಗಾಗಿ ಎರಡನೇ ಅಲೆಯು ವ್ಯಾಪಕವಾಗಿ ಹರಡಿದೆ. ಅನೇಕ ಮಂದಿ ಸೋಂಕಿಗೆ ಬಲಿಯಾದರು. ಮುಂದೆ ಇದಕ್ಕೆ ಅವಕಾಶ ಕೊಡುವುದು ಬೇಡ. ಮಾನವ ಜನ್ಮ ಉಳಿಯಬೇಕಿದೆ ಮಾರ್ಮಿಕವಾಗಿ ನುಡಿದರು.