ತುಮಕೂರು: ದಿನೇದಿನೆ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿವೆ. ಹಲ್ಲೆ ನಡೆಸುತ್ತಿರುವವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಜಿ ಹೆಚ್ ರಮೇಶ್ ಆಗ್ರಹಿಸಿದರು.
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಸಾಮಾಜಿಕ ಹೋರಾಟಗಾರರಾದ ಎಸ್ ಆರ್ ಹಿರೇಮಠ ಹಾಗೂ ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜಿ ಹೆಚ್ ರಮೇಶ್, ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ತಾವು ಮಾಡಿರುವ ಭ್ರಷ್ಟಾಚಾರ ಮುಚ್ಚಿಹಾಕಲು ಸಾಮಾಜಿಕ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವಂತಹ ಪ್ರಕ್ರಿಯೆಗಳು ಇಂದು ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬಳಿ ಇರುವ ಕ್ಯಾತನಹಳ್ಳಿ ಗ್ರಾಮದ 200 ಎಕರೆ ಜಮೀನನ್ನು ರಾಜಕೀಯ ವ್ಯಕ್ತಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿ ನುಂಗುವ ಕಾರ್ಯ ಮಾಡಿದ್ದಾರೆ. ಇದರ ಬಗ್ಗೆ ಮಾಹಿತಿ ಕಲೆ ಹಾಕಲು ಹೋದಂತಹ ಸಾಮಾಜಿಕ ಹೋರಾಟಗಾರರಾದ ಎಸ್ ಆರ್ ಹಿರೇಮಠ ಅವರ ಮೇಲೆ ಹಲ್ಲೆ ನಡೆದಿದೆ. ಇಂತಹ ಸಮಯದಲ್ಲಿ ಅವರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿ ಸರ್ಕಾರದ ಕರ್ತವ್ಯ. ಹಾಗಾಗಿ ಇಂದು ಸಾಮಾಜಿಕ ಹೋರಾಟಗಾರರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.