ತುಮಕೂರು: ಸುಪ್ರೀಂಕೋರ್ಟ್ ತೀರ್ಪಿನನ್ವಯ ರಾಜ್ಯ ಸರಕಾರ ಎಸ್ಸಿ-ಎಸ್ಟಿ ನೌಕರರ ಹಿಂಬಡ್ತಿ ರದ್ದು ಮಾಡಿ ಆದೇಶ ಹೊರಡಿಸಿದೆ. ಆದರೂ ಸಹ ಲೋಕೋಪಯೋಗಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂಬಡ್ತಿ ರದ್ದಾಗಿರುವ ನೌಕರರಿಗೆ ಸೂಕ್ತ ಸ್ಥಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9.2.2017 ರಲ್ಲಿ ಎಸ್ಸಿ-ಎಸ್ಟಿ ನೌಕರರ ಬಡ್ತಿ ಮೀಸಲಾತಿ ಬಗ್ಗೆ ಬಂದಿದ್ದ ವ್ಯತಿರಿಕ್ತ ತೀರ್ಪಿನಿಂದ 3,799 ಮಂದಿ ವಿವಿಧ ಇಲಾಖೆಯ ನೌಕರರು ಹಿಂಬಡ್ತಿ ಅನುಭವಿಸಬೇಕಾಯಿತು. ಬುದ್ಧಿಜೀವಿಗಳು, ಹೋರಾಟಗಾರರು ನಿರಂತರ ಹೋರಾಟ ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದಾಗಿ ಈ ಕಾಯ್ದೆ ಜಾರಿಯಾಗಿದೆ ಎಂದರು. ರಾಜ್ಯದಲ್ಲಿ 85,000 ಎಸ್ಸಿ ನೌಕರರು, 20,000 ಎಸ್ಟಿ ನೌಕರರು ಸೇರಿ ಒಟ್ಟು 1.05 ಲಕ್ಷ ನೌಕರರಿದ್ದಾರೆ. ಈ ಪೈಕಿ 3,799 ಮಂದಿ ನೌಕರರಿಗೆ ಹಿಂಬಡ್ತಿಯಾದ ಸಂದರ್ಭದಲ್ಲಿ 13 ಜನ ನೌಕರರು ಆತಂಕಕ್ಕೆ ಒಳಗಾಗಿ ಹೃದಯಾಘಾತಕ್ಕೀಡಾದರು. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿದ್ದ ಎಸ್ಸಿ-ಎಸ್ಟಿ ನೌಕರರು ಕಳೆದ 27 ತಿಂಗಳಿನಿಂದ ನಿರಂತರ ಹೋರಾಟ ಮಾಡಿರೋದಕ್ಕೆ ಜಯ ದೊರಕಿದೆ ಎಂದರು.
ಸದ್ಯದಲ್ಲಿಯೇ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಹೇಳುವ ಸಲುವಾಗಿ ಬೆಂಗಳೂರಿನಲ್ಲಿ ಬೃಹತ್ ಕೃತಜ್ಞತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಈ ಸಮಾವೇಶಕ್ಕೆ ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದರು.
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಎಸ್ಸಿ-ಎಸ್ಟಿ ನೌಕರರ ಹಿಂಬಡ್ತಿ ರದ್ದು ಮಾಡಿ ಆದೇಶ ಹೊರಡಿಸಿದ್ದರೂ ಸಹ ಕೆಲ ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ಇನ್ನೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಲೋಕೋಪಯೋಗಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂಬಡ್ತಿ ರದ್ದಾಗಿರುವ ನೌಕರರಿಗೆ ಸೂಕ್ತ ಸ್ಥಾನ ನೀಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮುಕ್ತ ಮನಸ್ಸಿಲ್ಲದ ಜಾತಿವಾದಿ ಅಧಿಕಾರಿಗಳು ಸರ್ಕಾರದ ಈ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.