ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ತಾಲೂಕಿನ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಹೇಮಾವತಿ ನಾಲೆ ಅಗಲೀಕರಣ, ತುಂಗಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ರೈಲ್ವೇ, ರಸ್ತೆ ಅಗಲೀಕರಣಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇದೇ ವೇಳೆ ಹಸಿರು ಸೇನೆ ಜಿಲ್ಲಾಧ್ಯಕ್ಷ ಗೋವಿಂದ ರಾಜು ಮಾತನಾಡಿ, ತುಮಕೂರು ಬರ ಪೀಡಿತ ಜಿಲ್ಲೆಯಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಸರ್ಕಾರ ಇಲ್ಲಿಯವರೆಗೂ ಬೆಳೆ ನಷ್ಟ ಪರಿಹಾರ, ಬೆಳೆ ವಿಮೆಯನ್ನು ಸಹ ರೈತರಿಗೆ ಪಾವತಿ ಮಾಡಿಲ್ಲ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿರುವುದರಿಂದ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಬಿಡುವಂತಾಗುತ್ತದೆ. ಹೇಮಾವತಿ ನಾಲೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ ಗಳನ್ನು ಶ್ರೀಘ್ರವಾಗಿ ಅನುಷ್ಠಾನ ಮಾಡಬೇಕಿದೆ ಎಂದರು.
ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ವಶಪಡಿಸಿಕೊಂಡು, ಭಿಕ್ಷೆಯ ರೂಪದಲ್ಲಿ ರೈತರಿಗೆ ಹಣವನ್ನು ನೀಡಲಾಗುತ್ತಿದೆ. ವೈಜ್ಞಾನಿಕವಾದ ಬೆಲೆ ನಿಗದಿ ಮಾಡಬೇಕು. ತುಂಗಭದ್ರಾ ಯೋಜನೆ ಕುಂಠಿತವಾಗಿದ್ದು, ಇದರ ಜೊತೆಗೆ ಹೇಮಾವತಿ ನಾಲೆಯನ್ನು ಅಗಲೀಕರಣ ಮಾಡುವ ಮೂಲಕ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಬಿಡಬೇಕು, ಅಲ್ಲದೆ ಕೆರೆಗಳು, ರಾಜಕಾಲುವೆಗಳು ಒತ್ತುವರಿಯಾಗಿದ್ದು, ಎಲ್ಲವನ್ನೂ ತೆರವುಗೊಳಿಸಬೇಕು. ಅನಧಿಕೃತವಾಗಿ ಹಳ್ಳಿಗಳಲ್ಲಿ ನಿರ್ಮಾಣಗೊಂಡಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ರೈಲ್ವೆ ಮಾರ್ಗಕ್ಕೆ ಪಡೆದಿರುವ ಭೂಮಿಗೆ ಸರಿಯಾದ ರೀತಿಯಲ್ಲಿ ಭೂ ಪರಿಹಾರ ನೀಡದೆ, ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ. ಮನಬಂದ ರೀತಿಯಲ್ಲಿ ಅಧಿಕಾರಿಗಳು ರೈತರಿಗೆ ಪರಿಹಾರದ ಹಣ ನೀಡುತ್ತಿದ್ದು, ಭೂಮಿಯ ಬೆಲೆಗಿಂತ ಮೂರು ಪಟ್ಟು ಹೆಚ್ಚು ಹಣ ನೀಡಬೇಕು. ಭೂಮಿ ಕಳೆದುಕೊಂಡ ನಂತರ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ದೇಶದ ಬೆನ್ನೆಲುಬು ಎಂದು ಕರೆಯುವ ರೈತರಿಗೆ ವಂಚನೆ ಮಾಡಲಾಗುತ್ತಿದೆ. ಪವರ್ ಗ್ರಿಡ್, ಕೆಪಿಟಿಸಿಎಲ್ ಕಂಪನಿಯವರು ರೈತರಿಗೆ ಪರಿಹಾರದ ಹಣ ನೀಡುವಲ್ಲಿ ಮೋಸ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯ ಮಾಡುವುದನ್ನು ಬಿಟ್ಟು ಮೊದಲು ರೈತರ ಸಾಲಮನ್ನಾ ಮಾಡಲಿ ಎಂದು ಆಗ್ರಹಿಸಿದರು.