ತುಮಕೂರು/ಪಾವಗಡ: ತಾಲೂಕಿನಲ್ಲಿ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ವರುಣನ ಆರ್ಭಟಕ್ಕೆ ಕೆರೆಕುಂಟೆಗಳ ಕಟ್ಟೆಗಳೆಲ್ಲ ಒಡೆದು ನೀರು ಪೋಲಾಗುತ್ತಿದ್ದು, ಕೂಡಲೇ ತಾಲೂಕು ಆಡಳಿತಾಧಿಕಾರಿಗಳು ಎಚ್ಚೆತ್ತುಕೊಂಡು ಕೆರೆ ಕುಂಟೆಗಳನ್ನು ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಪಟ್ಟಣದ ದಂಡಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.
ಈ ವೇಳೆ ಹಸಿರು ಸೇನೆ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಮಳೆ ಇಲ್ಲದೆ ಬರಗಾಲ ಆವರಿಸಿ ತಾಲೂಕಿನ ಜನ ಉದ್ಯೋಗ ಅರಸಿ ಪಟ್ಟಣಗಳಿಗೆ ಗುಳೆ ಹೋಗಿದ್ದಾರೆ. ಈಗ ಮಳೆಯಾದ ಪರಿಣಾಮ ತಾಲೂಕಿನಲ್ಲಿರುವ ಸುಮಾರು 148 ಕೆರೆಗಳಿಗೂ ನೀರು ಬಂದಿರುವುದು ಸಂತೋಷದ ವಿಷಯ. ಆದ್ರೆ ನೀರು ಸಂಗ್ರಹಿಸಬೇಕಿದ್ದ ಕೆರೆ ಕಟ್ಟೆಗಳು ಬಿರುಕು ಬಿಟ್ಟು, ರಂಧ್ರಗಳಾಗಿ ನೀರೆಲ್ಲ ಪೋಲಾಗುತ್ತಿದೆ. ಹೀಗೆ ಮುಂದುವರೆದರೆ ಜನ, ಜಾನುವಾರುಗಳಿಗೆ ಕುಡಿಯಲು ಸಹ ನೀರು ಸಿಗದೆ ಪರದಾಡುವಂತ ಪರಿಸ್ಥಿತಿ ಉದ್ಭವಿಸಿ ರೈತರು ಸಂಕಷ್ಟಕ್ಕೀಡಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಸಿಕೆಪುರ, ಗುಂಡಾರ್ಲಹಳ್ಳಿ, ಪಳವಳ್ಳಿ, ಸಂತೆಬಂಡೆ, ಉಪ್ಪಾರಹಳ್ಳಿ, ಕ್ಯಾತಗಾನ ಕೆರೆ ಸೇರಿದಂತೆ ಇನ್ನೂ ಅನೇಕ ಕೆರೆಗಳ ಕಟ್ಟೆಗಳು ನೀರಿನ ರಭಸಕ್ಕೆ ಹಾಳಾದ ಪರಿಣಾಮ ರೈತರಿಗೆ ಸದ್ಬಳಕೆಯಾಗಬೇಕಾದ ಕೆರೆ ನೀರು ಪೋಲಾಗುತ್ತಿದೆ. ಈ ಕೂಡಲೇ ಅಧಿಕಾರಿಗಳು ಗಮನ ಹರಿಸಿ ಕೆರೆ ಕಟ್ಟೆಗಳಿಗೆ ಸಿಮೆಂಟ್ ತಡೆಗೋಡೆ ನಿರ್ಮಿಸಬೇಕು. ರಂಧ್ರಗಳನ್ನು ಮುಚ್ಚಿಸುವ ದುರಸ್ತಿ ಕಾರ್ಯ ನಡೆಸಬೇಕಿದೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.