ತುಮಕೂರು: ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದಿರುವ ಸಚಿವ ಸಂಪುಟ ನಿರ್ಧಾರದ ವಿಚಾರದಲ್ಲಿ ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಆಕ್ಟ್, ಸೆಕ್ಷನ್ ಬಗ್ಗೆ ಮಾತನಾಡ್ತಾರೆ. ಅಂದು ಸಿಬಿಐ ಅನುಮತಿ ಕೇಳಿದ್ದರು. ಅದಕ್ಕೆ ಸರ್ಕಾರ ಅನುಮತಿ ನೀಡಿತ್ತು ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದ ಡಿಸಿಎಂ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ. ನ್ಯಾಯಾಲಯದ ಮುಂದೆ ಕ್ಲೀನ್ಚಿಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ ಎಂದು ಆರೋಪಿಸಿದರು.
ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್: ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡಿಸುತ್ತೇನೆ. ಒಂದು ಸಲ ಎಫ್ಐಆರ್ ಆದ್ಮೇಲೆ ಚಾರ್ಜ್ ಶೀಟ್ ಕೊಟ್ಟರೆ ಬದಲಾವಣೆ ಮಾಡಲು ನ್ಯಾಯಾಧೀಶರ ಅನುಮತಿ ಪಡೆಯಬೇಕು. ಪ್ರಕರಣಗಳು ಒಂದು ಸಲ ಕೋರ್ಟ್ಗೆ ಹೋದ್ರೆ ನ್ಯಾಯಾಧೀಶರೇ ತೀರ್ಮಾನ ತೆಗೆದುಕೊಳ್ಳಬೇಕು. ಕ್ಯಾಬಿನೆಟ್ಗೆ ಯಾವುದೇ ಅಧಿಕಾರ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಕಾನೂನಾತ್ಮಕವಾಗಿ ಪ್ರಕ್ರಿಯೆ ನಡೆದಿರಲಿಲ್ಲ ಎಂಬ ಕಾಂಗ್ರೆಸ್ ಸಮರ್ಥನೆ ವಿಚಾರ. ಇಷ್ಟು ದಿನ ಏನ್ ಮಾಡ್ತಿದ್ರಿ. ಸ್ಪೀಕರ್ ಅನುಮತಿ ಪಡೆಯದೇ ಅಥವಾ ಅಂದಿನ ಅಡ್ವೊಕೇಟ್ ಜನರಲ್ ಅಡ್ವರ್ಸ್ ರಿಪೋರ್ಟ್ ಇದ್ದಾಗಲೂ ಕೋರ್ಟ್ ಗೆ ಬಂದಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಅವಧಿಯಲ್ಲಿ ಒಳ ಮೀಸಲಾತಿ ಹೆಚ್ಚಳ: ಡಿಕೆ ಶಿವಕುಮಾರ್ ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಇದನ್ನು ನ್ಯಾಯಾಲಯದಲ್ಲೇ ವಜಾ ಮಾಡಿಸಬಹುದಿತ್ತು. ರಾಜ್ಯ ಸರ್ಕಾರಕ್ಕೆ ನೀವೇ ಯಾಕೆ ಕಪ್ಪು ಚುಕ್ಕೆಯಿಟ್ರಿ. ಲೋಕಸಭೆ ಚುನಾವಣೆ ಮೊದಲೇ ಒಳಮೀಸಲಾತಿ ಆಗುತ್ತೆ. ರಾಜ್ಯ ಸರ್ಕಾರದ ಕೆಲಸ ಏನಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹೆಚ್ಚಳ ಮಾಡಿತ್ತು, ಅದು ಜಾರಿಯಾಗಿದೆ ಎಂದು ಹೇಳಿದರು.
ಬ್ಯಾಕ್ ಲಾಗ್ ಜಾರಿಯಾಗಿದೆ. ಕೆಪಿಎಸ್ಸಿ ಉದ್ಯೋಗದಲ್ಲಿ ಮೀಸಲಾತಿ ಘೋಷಣೆ ಮಾಡಬೇಕಿದೆ. ಒಳ ಮೀಸಲಾತಿಯಲ್ಲಿ ಒಂದು ಹಂತದಲ್ಲಿ ಗೆಲುವು ಸಾಧಿಸಿದ್ದೇವೆ. ಅರುಣ್ ಮಿಶ್ರಾ ತೀರ್ಪು ಅನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಅರುಣ್ ಮಿಶ್ರಾ ರೆಕಮಂಡೇಷನ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ಆಗುತ್ತೆ. ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ ಎಂದರು.
ಒಳ ಮೀಸಲಾತಿ ಹೋರಾಟಗಾರರಿಗೆ ಅದು ಮೊದಲನೇ ಗೆಲುವು. ಅಟಾರ್ನಿ ಜನರಲ್ ಅವರೇ ಒಳ ಮೀಸಲಾತಿ ಪರ ಬಂದಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನಿ, ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಇಡೀ ದೇಶದಲ್ಲಿ ಒಳ ಮೀಸಲಾತಿಗೆ ನ್ಯಾಯ ಸಿಗಲಿದೆ ಎಂದು ಮಾಹಿತಿ ನೀಡಿದರು.
ಜಾತಿಗಣತಿ ವರದಿ ಪ್ರಿಂಟ್ ಸಹಿ ಎಲ್ಲ ಆಗಿದೆ:ಜಾತಿಗಣತಿ ಅವಶ್ಯಕತೆಯಿದೆ. ಜಾತಿಗಣತಿ ಜೊತೆಗೆ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಲಾಗಿತು. ಸಿಎಂಗೆ ಬದ್ಧತೆಯಿರಬೇಕು. ಚುನಾವಣೆಗೆ ಮೊದಲು ಹೇಳಿದ್ದರು. ಜಾತಿ ಗಣತಿಗೆ 160 ಕೋಟಿ ಖರ್ಚು ಮಾಡಿದ್ರು. ಪದೇ ಪದೆ ಮಾಧ್ಯಮದಲ್ಲಿ ನಾನು ಮಾಡ್ತೀನಿ ಅಂತ ಹೇಳೋದು ಶೋಭೆ ತರಲ್ಲ. ವರದಿ ಮಾಡಿ ಪ್ರಿಂಟ್ ಹಾಕಿ, ಸಹಿ ಹಾಕಿ ಎಲ್ಲಾ ಆಗಿದೆ ಎಂದು ತಿಳಿಸಿದರು.
ಸಹಿ ಹಾಕಿಲ್ಲ ಅನ್ನೋದು ಒಂದು ಭಾಗ, ಮೂಲ ಪ್ರತಿ ನಾಪತ್ತೆಯಾಗಿದೆ ಅಂತ ಚರ್ಚೆ ಆಗುತ್ತಿದೆ. ಟ್ರಜರಿಯಲ್ಲಿ ಆಯ್ತಾ, ಕಚೇರಿಯಲ್ಲಿ ನಾಪತ್ತೆ ಆಯ್ತಾ. ಯಾರ ಕಸ್ಟಡಿಯಲ್ಲಿ ಇದ್ದಾಗ ಮೂಲ ಪ್ರತಿ ನಾಪತ್ತೆ ಆಯ್ತು , ಅನ್ನೋ ಬಗ್ಗೆ ತನಿಖೆಗೆ ಆದೇಶ ಮಾಡಲಿಲ್ಲ. ದೂರು, ಎಫ್ಐಆರ್ ಆಗಲಿಲ್ಲ.
ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಸಿಎಂ ಮಾಡ್ತಿದ್ದಾರೆ. ವರದಿ ಹೊರ ಬಂದರೆ ಏನು ಆಗಲ್ಲ. 2011ರ ಬಳಿಕ ಜನಗಣತಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಕುಟುಂಬದಲ್ಲಿ ಆಧಾರ್ ಕಾರ್ಡ್ ಇದೆ. ರಾಜ್ಯ ಜನತೆಯ ಮಾಹಿತಿ ಪಡೆಯಲು ಯಾವುದೇ ಗೊಂದಲವಿಲ್ಲ. ವರದಿಗಳು ಸದನದಲ್ಲಿ ಚರ್ಚೆ ಆಗಬೇಕು. ತಪ್ಪಾಗಿರುವ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆಯಾಗಲಿ ಎಂದು ಆಗ್ರಹಿಸಿದರು.
ಇದನ್ನೂಓದಿ:ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ನಿರ್ಣಯ ಕಾನೂನು ಬಾಹಿರ: ಬಿ.ವೈ. ವಿಜಯೇಂದ್ರ