ತುಮಕೂರು: ಕ್ರೀಡೆಯಿಂದ ದೇಹ ಹಾಗೂ ಮನಸ್ಸಿನ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯವಂತ ಜೀವನಕ್ಕಾಗಿ ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ಮನೋಭಾವ ಹೆಚ್ಚುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಎಲ್ಲಾ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಸ್ಪರ್ಧಿಸಬೇಕು, ಕ್ರೀಡೆಗಳು ಮನುಷ್ಯನ ಅವಿಭಾಜ್ಯ ಅಂಗ. ಕ್ರೀಡೆಯಿಂದ ದೇಹ, ಮನಸ್ಸಿನ ಆರೋಗ್ಯ ವೃದ್ಧಿಸುತ್ತದೆ, ಆರೋಗ್ಯಯುತ ಜೀವನಕ್ಕಾಗಿ ಕ್ರೀಡೆ ಸಹಕಾರಿ ಎಂದರು.
ಅವಶ್ಯಕವಲ್ಲದ ಚಿಂತನೆಗಳಿಗೆ ಆರೋಗ್ಯ ಕಳೆದುಕೊಳ್ಳಬಾರದು. ಆರೋಗ್ಯ ಕೈಕೊಟ್ಟಾಗ ನಿದ್ರೆ ಮಾಡುವ ಆಸೆ ಇದ್ದರೂ ನಿದ್ರೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿದಿನ ವ್ಯಾಯಾಮ, ಯೋಗಾಭ್ಯಾಸ ರೂಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಮತ್ತು ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು.