ತುಮಕೂರು: ತುಮಕೂರು ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ ಕಾಂಗ್ರೆಸ್ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಬಾರಿ ನಡೆದ ರಾಜ್ಯಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆಯಿಂದ ದೇವೇಗೌಡರು ಚುನಾವಣೆಗೆ ನಿಂತಿದ್ದರಿಂದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿತ್ತು.
ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಅವರು, ತಮ್ಮನ್ನು ಪಕ್ಷದಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ, 2023ರ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಮುದ್ದ ಹನುಮೇಗೌಡ ಘೋಷಿಸಿದ್ದಾರೆ.
ಅಲ್ಲದೇ, ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು ಇನ್ನೂ ತೀರ್ಮಾನ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹಿಂದಿರುಗುವ ಮಾತೇ ಇಲ್ಲ. ಯಾವ ಮನವೊಲಿಕೆಯು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಬಂದಿದ್ದೇನೆ ಎಂದೂ ತಿಳಿಸಿದ್ದಾರೆ.
ಒಂದು ಪಕ್ಷ ಬಿಡಲು ಬಲವಾದ ಕಾರಣ ಅದು ಪಕ್ಷದಿಂದ ಆಗಿರಬೇಕು ಮತ್ತು ಇಲ್ಲ ನನ್ನಿಂದ ಆಗಿರಬೇಕು. ಅದು ನನ್ನಿಂದ ಕಡೆ ಆದರೆ, ಪಕ್ಷ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ ಎಂದು ಹೇಳಿದ್ಧಾರೆ.
1989ರಲ್ಲಿ ಕಾಂಗ್ರೆಸ್ ಬಿ ಫಾರಂ ಕೊಟ್ಟು ನಂತರ ಬೇರೆಯವರಿಗೆ ನೀಡಿದರು. ನಂತರ 2019ರಲ್ಲಿ ಸಂಸದ ಆಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರೀ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ಶಾಸಕ, ಸಂಸದರಾಗಿ ಆಯ್ಕೆಯಾಗಲು ಅವಕಾಶ ಕೊಟ್ಟರು. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ ಎಂದೂ ಮುದ್ದಹನುಮೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಪ್ರತಿ ಗ್ರಾ.ಪಂನಿಂದ 250 ಜನ ಕರೆತರಲು ಪಿಡಿಓಗಳಿಗೆ ಸೂಚನೆ: ಖಾದರ್ ಕಿಡಿ