ತುಮಕೂರು: ಉತ್ತಮ ವಿದ್ಯಾರ್ಹತೆ ಇರುವ ಹಾಗೂ ಒಮ್ಮೆ ತುಮಕೂರು ನಗರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ತಮ್ಮ ಅಳಿಯ ರಫೀಕ ಅಹಮದ್ಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದರೂ ಸಹ ಮಾಜಿ ಡಿಸಿಎಂ, ಹಿರಿಯ ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಫಿ ಅಹಮದ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡದಿರುವುದಕ್ಕೆ ಮನನೊಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಚುನಾವಣೆ ಎದುರಿಸಲು ಶಕ್ತಿ ಇಲ್ಲದಂಥ ಇಕ್ಬಾಲ್ ಅಹಮದ್ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಅನೇಕ ಬಾರಿ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದ ವೇಳೆ ಟಿಕೆಟ್ ನೀಡುವ ಸಂಬಂಧ ಸಾಕಷ್ಟು ಭರವಸೆ ನೀಡಿದ್ದರು ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಕೂಡ ಮನವಿ ಮಾಡಲಾಗಿತು. ಆದರೆ ಹಿರಿಯ ಕಾಂಗ್ರೆಸ್ ಮುಖಂಡನ ಮಾತಿಗೆ ಮನ್ನಣೆ ನೀಡಿಲ್ಲ. ಅಲ್ಲದೇ ತುಮಕೂರು ನಗರದಲ್ಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಸ್ಲಿಂ ಸಮುದಾಯದ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈ ಬಾರಿ ಉದ್ದೇಶಪೂರ್ವಕ ದುರ್ಬಲ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ಭವಿಷ್ಯದಲ್ಲಿ ಅಲ್ಪಸಂಖ್ಯಾತರು ತುಮಕೂರು ನಗರ ಕ್ಷೇತ್ರದಿಂದ ಸ್ಪರ್ಧಿಸಬಾರದು ಎಂಬ ಹುನ್ನಾರವಿದೆ. ಜಿಲ್ಲೆಯ ಅಲ್ಪಸಂಖ್ಯಾತರನ್ನು ದುರ್ಬಲಗೊಳಿಸಲು ನಮ್ಮ ನಾಯಕರು ಮೊದಲೇ ಯೋಜಿಸಿದ್ದಾರೆ. ಇದು ತುಮಕೂರು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ , ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ ಪರಮೇಶ್ವರ ಅವರಿಗೆ ರವಾನಿಸಿದ್ದಾರೆ.
ನಾಲ್ಕು ದಶಕದಿಂದ ಕಾಂಗ್ರೆಸ್ ಪಕ್ಷ ತುಮಕೂರು ನಗರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತಾ ಬಂದಿದೆ. ಹಿಂದೆ ಮಾಜಿ ಶಾಸಕ ಶಫಿ ಅಹಮ್ಮದ್ ಕುಟುಂಬಕ್ಕೆ ಮಣೆ ಹಾಕಲಾಗಿತ್ತು. ಹಿರಿಯ ಕಾಂಗ್ರೆಸ್ ನಾಯಕ ಶಫಿ ಅಹಮ್ಮದ್ ಎರಡು ಬಾರಿ ಹಾಗೂ ಅವರ ಅಳಿಯ ರಫಿಕ್ ಅಹಮ್ಮದ್ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಅವರ ಕುಟುಂಬದ ಹೊರಗಿನವರಿಗೆ ಕೈ ಟಿಕೆಟ್ ನೀಡಲಾಗಿದೆ. ಶಫಿ ಅಹಮದ್ ಕುಟುಂಬ ಹೊರತು ಪಡಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಕ್ಷೇತ್ರದಲ್ಲಿ ಕಾರ್ಯಕರ್ತರ ಒತ್ತಾಯವಿತ್ತು.
ಇದನ್ನೂಓದಿ: ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಜೆಡಿಎಸ್ ಸೇರ್ಪಡೆ; ಟಿಕೆಟ್ ನೀಡದ ಕಾಂಗ್ರೆಸ್ ನೆನೆದು ಕಣ್ಣೀರು