ತುಮಕೂರು: ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಕೆಲವರು ಮುಂದಾಗಿದ್ದು, ಅದಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕುರಂಕೋಟೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ಕುರಂಕೋಟೆ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಮಳಿಗೆಯನ್ನು ತೆರೆಯಲು ಕೆಲವರು ಮುಂದಾಗಿದ್ದು, ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಹಾಗಾಗಿ ಮಳಿಗೆಯನ್ನು ಪ್ರಾರಂಭಿಸಿದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿ ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕುರಂಕೋಟೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಮೌನ ಪ್ರತಿಭಟನೆ ನಡೆಸಿದರು.
ಕುರಂಕೋಟೆಯಲ್ಲಿ ಪುರಾತನ ಕಾಲದ ದೊಡ್ಡಕಾಯಪ್ಪ ದೇವಸ್ಥಾನವಿದೆ. ಈ ಪ್ರದೇಶಕ್ಕೆ ಅನೇಕ ರೋಗಪೀಡಿತರು ಬಂದು ದೇವರ ದರ್ಶನ ಪಡೆದು, ಒಂದೆರಡು ದಿನಗಳ ಕಾಲ ಅಲ್ಲಿಯೇ ತಂಗಿದ್ದು, ತಮ್ಮ ಆರೋಗ್ಯವನ್ನು ಸರಿಪಡಿಸಿಕೊಂಡು ಹೋಗುತ್ತಾರೆ. ಅಂತಹ ಪವಿತ್ರ ಕ್ಷೇತ್ರದಲ್ಲಿ ಸರ್ಕಾರ ಎಂಎಸ್ಐಎಲ್ ಮಧ್ಯದ ಅಂಗಡಿ ತೆರೆಯಲು ಅವಕಾಶ ನೀಡಿದೆ. ಇದರಿಂದ ಅಲ್ಲಿ ಸುತ್ತಮುತ್ತಲು ಇರುವಂತಹ ಸಾರ್ವಜನಿಕ ಪ್ರದೇಶ, ಶಾಲೆ, ಮಹಿಳೆಯರಿಗೆ ತೊಂದರೆಯಾಗಲಿದೆ, ಹಾಗಾಗಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ದೊಡ್ಡಯ್ಯ ಮನವಿ ಮಾಡಿದರು.