ತುಮಕೂರು: ಕೊರಟಗೆರೆ ತಾಲೂಕಿನ ತೋವಿನಕೆರೆಯ ಸುತ್ತಮುತ್ತಲಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ಸಿದ್ಧರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಕೊರಟಗೆರೆ ತಾಲೂಕು ತೋವಿನಕೆರೆಯಿಂದ ಬೈಕ್ ರ್ಯಾಲಿ ಹೊರಟ ನೂರಾರು ಪ್ರತಿಭಟನಾಕಾರರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿದರು. ಅನೇಕ ವರ್ಷಗಳಿಂದಲೂ ಕೊರಟಗೆರೆ ಭಾಗದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಹಾಗಾಗಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಜಾನುವಾರುಗಳಿಗೂ ಮೇವಿನ ತೊಂದರೆ ಆಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್ ಸೇರಿ ಇತರೆ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನ ಹರಿಸಲಾಗುತ್ತಿದೆ. ಆದರೆ, ತೋವಿನಕೆರೆ ಸುತ್ತಮುತ್ತಲಿನ ಭಾಗಕ್ಕೆ ನೀರು ಹರಿಸಿಲ್ಲ. ಹೀಗಾಗಿ ಈ ಭಾಗದ ನೀರಾವರಿ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ಗೆ ಒತ್ತಾಯಿಸಿದರು.