ತುಮಕೂರು: ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಸದ್ಯದಲ್ಲಿ ಉಪಚುನಾವಣೆ ನಡೆಯಲಿದೆ. ಈ ಉಪ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಪಣ ತೊಟ್ಟಿವೆ. ಇದೀಗ ಎರಡೂ ಪಕ್ಷಗಳ ಮುಖಂಡರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲವಾದರೂ ಈ ಬಾರಿ ಗೆಲುವಿಗಾಗಿ ಹಲವು ರೀತಿಯ ಪ್ರಯತ್ನ ಮುಂದುವರೆಸಿದೆ. ಮುಖ್ಯವಾಗಿ ಹಿಂದೂಗಳಿಗೆ ರಕ್ಷಣೆ ದೊರೆಯುತ್ತಿಲ್ಲ ಎಂದು ಪ್ರತಿಪಾದಿಸುತ್ತಿದೆ. ಶಿರಾದಲ್ಲಿ ಬಹು ಸಂಖ್ಯಾತರಾಗಿರುವ ಹಿಂದೂಗಳಿಗೆ ಅಲ್ಪಸಂಖ್ಯಾತರಿಂದ ದಬ್ಬಾಳಿಕೆ ಮುಂದುವರೆದಿದೆ, ಇದಕ್ಕೆ ಹಿಂದಿನ ಸರ್ಕಾರಗಳು ಹಾಗೂ ಇಲ್ಲಿ ಚುನಾಯಿತರಾದ ಜನಪ್ರತಿನಿಧಿಗಳು ಕೂಡ ಸಾಥ್ ನೀಡಿದ್ದಾರೆ. ಹೀಗಾಗಿ ಈ ಬಾರಿ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡುವಂತಹ ಭರವಸೆಯನ್ನು ನೀಡುವ ಮೂಲಕ ಚುನಾವಣಾ ಕಣಕ್ಕೆ ನಾವು ಇಳಿದಿದ್ದೇವೆ ಎನ್ನುತ್ತಾರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ಗೌಡ.
ಹಿಂದೂಗಳಿಗೆ ರಕ್ಷಣೆ ಎಂಬ ಬಿಜೆಪಿಯ ಘೋಷಣೆಯು ಕಾಂಗ್ರೆಸ್ ಮುಖಂಡರಿಗೆ ಸಾಕಷ್ಟು ಇರಿಸುಮುರುಸು ಉಂಟು ಮಾಡುತ್ತಿದೆ. ಅದರಲ್ಲೂ ಮಾಜಿ ಸಚಿವ ಟಿ ಬಿ ಜಯಚಂದ್ರ ಬಿಜೆಪಿಯ ಈ ನಡೆ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಮುಖಂಡರು ಏನೇನೋ ಅಜೆಂಡಾ ಇಟ್ಟುಕೊಂಡು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಬುದ್ಧತೆ ಇರುವಂತಹ ಶಿರಾ ಕ್ಷೇತ್ರದ ಮತದಾರರು ನ್ಯಾಯವನ್ನು ಎತ್ತಿ ಹಿಡಿಯುವಂತಹ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ತಿಳಿಸಿದ್ದಾರೆ.
ಒಟ್ಟಿನಲ್ಲಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೋಮು ಸೌಹಾರ್ದತೆಯ ವಿಷಯ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದೇ ಹೇಳಬಹುದಾಗಿದೆ. ಇದಕ್ಕೆ ಕ್ಷೇತ್ರದ ಮತದಾರರು ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.