ತುಮಕೂರು: ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಅವಧಿಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಹಂಪ್ ಗಮನಿಸದೆ ಕಾರು ಎಗರಿಸಿ ಅಪಘಾತ: ಕುಣಿಗಲ್, ಬೆಂಗಳೂರಿನಿಂದ ಜಿಲ್ಲೆಯ ಹಟ್ಟೂರಿನ ಚಿಕ್ಕಣ್ಣ ಸ್ವಾಮಿ ದೇವಾಲಯಕ್ಕೆ ಬರುತ್ತಿದ್ದ ಕಾರು ಬೆಳಗಿನ ಜಾವ 3.30ರ ಸಮಯದಲ್ಲಿ ಕುಣಿಗಲ್ ಬಳಿ ಸ್ವಯಂ ಅಪಘಾತವಾಗಿದೆ. ಇಲ್ಲಿನ ಅಂಚೆಪಾಳ್ಯದ ಬಳಿ ರಸ್ತೆಯಲ್ಲಿದ್ದ ಹಂಪ್ ಗಮನಿಸದೆ ಚಾಲಕ ವೇಗವಾಗಿ ಬಂದು ಎಗರಿಸಿದ್ದಾನೆ. ಕಾರು ಎಗರಿದ ರಭಸಕ್ಕೆ ಅಪಘಾತ ಸಂಭವಿಸಿದ್ದು, ಮೂವರ ಪೈಕಿ ಬೆಂಗಳೂರಿನ ವಿಜಯ ನಗರ ನಿವಾಸಿ ನರಸಿಂಹ (29) ಸಾವನ್ನಪ್ಪಿದ್ದಾನೆ. ನಾಯಂಡನಹಳ್ಳಿ ನಿವಾಸಿ ವಿಜಯ್ ಎಂಬವರ ಕಾಲು ಮುರಿದಿದ್ದು, ಮನೋಜ್ ಎಂಬವರಿಗೆ ತಲೆ ಭಾಗಕ್ಕೆ ಪೆಟ್ಟಾಗಿದೆ. ಗಾಯಾಳುಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಟ್ ಅಂಡ್ ರನ್ ಕೇಸ್: ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಬಾಲೇನಹಳ್ಳಿ ಗೇಟ್ ಬಳಿ ಶನಿವಾರ ರಾತ್ರಿ ಸರ್ಕಾರಿ ಬಸ್ ಅನ್ನು ಪ್ರಯಾಣಿಕರ ಶೌಚಕ್ಕಾಗಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯು ಬೆಂಗಳೂರಿನ ಬಿ.ಬಿ.ಎಂ.ಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮೂಲತಃ ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹಾಳಕೊಪ್ಪ ಗ್ರಾಮದ ಮಾಯಮ್ಮ(35) ಎಂದು ಗುರುತಿಸಲಾಗಿದೆ.
ಬೈಕ್ ಅಪಘಾತ: ಶಿರಾ ತಾಲೂಕಿನ ಮಾಗೋಡು ಗೇಟ್ ಬಳಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 8.30 ರ ಸಮಯದಲ್ಲಿ ಶಿರಾ-ಮಧುಗಿರಿ ರಸ್ತೆಯ ಮಾಗೋಡು ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ತಾಲೂಕಿನ ಕೊಂಡಮ್ಮನಹಳ್ಳ ನಿವಾಸಿ ರಾಕೇಶ್ (22) ಹಾಗೂ ಗುಳಿಗೆನಹಳ್ಳಿ ನಿವಾಸಿ ನಾಗರಾಜ(21) ಮೃತರಾಗಿದ್ದಾರೆ. ವೃದ್ಧಿ (20) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಬಂಟ್ವಾಳ: ಅಪಘಾತ ತಪ್ಪಿಸಲು ಹೋಗಿ ಮನೆಗೆ ನುಗ್ಗಿದ ಪಿಕಪ್ ವಾಹನ