ತುಮಕೂರು : ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ರಸ್ತೆ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆಯನ್ನು ನೋಡಲು ಮತ್ತಿಬ್ಬರು ಆ ಸ್ಥಳಕ್ಕೆ ಹೋಗಿದ್ದು, ಆಗ ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮತ್ತೊಬ್ಬ ಬೈಕ್ ಸವಾರ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ನರೇಂದ್ರ ಕುಮಾರ್, ಆಕಾಶ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ. ಮೊದಲು ಬೈಕ್ನಲ್ಲಿ ಹೋಗುತ್ತಿದ್ದ ಅರಸೀಕೆರೆ ಮೂಲದ ಆಕಾಶ್ ಮತ್ತು ಮಂಜುನಾಥ್ ಹತ್ಯಾಳು ಬೆಟ್ಟದಿಂದ ವಾಪಸ್ ಅರಸೀಕೆರೆಗೆ ಹೋಗುತ್ತಿದ್ದರು. ಈ ವೇಳೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆಕಾಶ್ ಮತ್ತು ಮಂಜುನಾಥ್ ಮೃತಪಟ್ಟಿದ್ದಾರೆ. ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಸ್ಥಳದಲಿದ್ದ ಜನರು ಅಪಘಾತವನ್ನು ನೋಡುತ್ತಿದ್ದರು. ಇನ್ನೊಂದೆಡೆ ನರೇಂದ್ರ ಕುಮಾರ್ ಮತ್ತೊಬ್ಬ ಸ್ನೇಹಿತ ಬೈಕ್ನಲ್ಲಿ ತುಮಕೂರು ಕಡೆಗೆ ಹೋಗುತ್ತಿದ್ದರು. ಮೊದಲು ನಡೆದ ಅಪಘಾತವನ್ನು ನೋಡಲು ರಸ್ತೆ ತಿರುವಿನಲ್ಲಿ ಬೈಕ್ ಚಲಾಯಿಸುವಾಗ ಹಿಂಬದಿಯಿಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ನರೇಂದ್ರ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೆ ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ : ಉಕ್ರೇನ್‌ನಲ್ಲಿ ಸಿಲುಕಿಕೊಂಡ ಬಾಗಲಕೋಟೆಯ ಇಬ್ಬರು MBBS ವಿದ್ಯಾರ್ಥಿಗಳು
ಕೆಲವೇ ನಿಮಿಷಗಳಲ್ಲಿ ಒಂದೇ ಸ್ಥಳದಲ್ಲಿ ಎರಡು ಅಪಘಾತಗಳು ಸಂಭವಿಸಿದ ಪರಿಣಾಮ ಮೂವರು ಅಸುನೀಗಿದ್ದಾರೆ. ಈ ಸಂಬಂಧ ಕೆ.ಬಿ. ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.