ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ನ ನಿವೃತ್ತ ನೌಕರರು ಅಖಿಲ ಭಾರತ ಬ್ಯಾಂಕ್ ಒಕ್ಕೂಟದ ಸಹಯೋಗದೊಂದಿಗೆ ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬ್ಯಾಂಕ್ನ ನಿವೃತ್ತ ನೌಕರರ ಸಮಸ್ಯೆಗಳಾದ ಏಕ ಪ್ರಕಾರದ ತುಟ್ಟಿಭತ್ಯೆ ಎಲ್ಲ ಪಿಂಚಣಿದಾರರಿಗೆ ನೀಡಬೇಕು, ಫ್ಯಾಮಿಲಿ ಪೆನ್ಷನ್ ಹೆಚ್ಚಳ ಮಾಡಬೇಕು, ಪಿಂಚಣಿಯ ಪರಿಷ್ಕರಣೆ, ಬ್ಯಾಂಕಿನ ಎಲ್ಲ ನಿವೃತ್ತರಿಗೂ ಪಿಂಚಣಿ ದೊರೆಯುವಂತಾಗಬೇಕು ಎಂಬ ಸವಲತ್ತುಗಳನ್ನು ನೀಡುವಲ್ಲಿ ಸರ್ಕಾರ ಮತ್ತು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ತಳೆದಿರುವ ನಕಾರಾತ್ಮಕ ಧೋರಣೆಯನ್ನು ಖಂಡಿಸಿ ಬ್ಯಾಂಕ್ ನಿವೃತ್ತರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಹಾಲಿಂಗಪ್ಪ, ಕಳೆದ 25 ವರ್ಷಗಳಿಂದ ನೀಡುತ್ತಿರುವ ಪಿಂಚಣಿಯಲ್ಲಿ ಏರಿಕೆಯಾಗಿಲ್ಲ. ಸರ್ಕಾರಿ ನೌಕರರ ಕುಟುಂಬಕ್ಕೆ ನೀಡುವಂತಹ ಫ್ಯಾಮಿಲಿ ಪಿಂಚಣಿ ನೀಡಬೇಕು. ಮೆಡಿಕಲ್ ಇನ್ಶೂರೆನ್ಸ್ ಸಂಬಂಧಿಸಿದಂತಹ ಪ್ರಿಮಿಯಂ ಕಟ್ಟುವಂತಹ ಹಣದ ದರವನ್ನು ಕಡಿಮೆ ಮಾಡಬೇಕು. ಅಲ್ಲದೇ, ಈ ಹಣಕ್ಕೆ ಜಿಎಸ್ಟಿ ಹಾಕಲಾಗುತಿದ್ದು, ಅದನ್ನು ತೆಗೆದುಹಾಕಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.