ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ 38 ದಿನಗಳ ಕಾಲ ಸತ್ಯಾಗ್ರಹ ನಡೆಸಿದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ತಿಳಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಈಗಾಗಲೇ 38 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲು ಶಿರಾದಿಂದ ತುಮಕೂರು ಜಿಲ್ಲಾಡಳಿತ ಕಚೇರಿವರೆಗೂ ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಮಯದಲ್ಲಿ ತಹಶೀಲ್ದಾರ್ ಅವರು ಮನವಿ ಸ್ವೀಕರಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು, ಅಧಿಕಾರಿಗಳ ಸಭೆ ನಡೆಸಿ, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದ್ರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನಂತರ ಮಾತನಾಡಿದ ಅವರು, ಓರ್ವ ಜನಪ್ರತಿನಿಧಿ ಹೇಳುತ್ತಾರೆ ನೀರು ಹರಿಸಲು ಎಲ್ಲಾ ರೀತಿಯ ಕಾನೂನು ಇವೆಯೆಂದು. ಮತ್ತೋರ್ವ ಜನಪ್ರತಿನಿಧಿ ಹೇಳುತ್ತಾರೆ ಕಾನೂನು ಇದ್ದರೆ ನನಗೆ ತೋರಿಸಿ ನಾನು ನೀರನ್ನು ಬಿಡುತ್ತೇನೆ ಎಂದು. ಈ ಜನಪ್ರತಿನಿಧಿಗಳು ಜನರನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಕುಡಿಯಲು ನೀರನ್ನು ಬಿಡಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಆರ್ ಪುಟ್ಟಕಾಮಣ್ಣ ಹೇಳಿದ್ರು.