ತುಮಕೂರು : ಕಾಂಗ್ರೆಸಿಗರು ಅರವತ್ತೈದು ವರ್ಷಗಳ ಕಾಲ ರಾಜ್ಯ ಲೂಟಿ ಮಾಡಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರು ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್ ಅಂಟಿಸುತ್ತಾರೆ ಗೊತ್ತಿಲ್ಲ. ದೆಹಲಿಯಿಂದ ಹಿಡಿದು ಕರ್ನಾಟಕದ ನಾಯಕರವರೆಗೆ ಹೆಚ್ಚಿನವರು ಜೈಲಿಗೆ ಹೋಗಿ ಬಂದು, ಬೇಲಿನಲ್ಲಿ ಹೊರಗಿರುವವರು ಎಂದು ಸಿದ್ದಗಂಗಾ ಮಠದಲ್ಲಿ ಸಚಿವ ಆರ್ ಅಶೋಕ ವಾಗ್ದಾಳಿ ನಡೆಸಿದರು.
ಸಿಎಂ ಬೊಮ್ಮಾಯಿ ಮೇಲೆ ಲೋಕಾಯುಕ್ತ ಆಗಲಿ ಎಸಿಬಿ ಆಗಲಿ ಒಂದು ಕೇಸು ದಾಖಲಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಕೇಸ್ ದಾಖಲಾಗಿತ್ತು. ಡಿ ಕೆ ಶಿವಕುಮಾರ್ ಅವರು ಜೈಲಿನಿಂದ ಇವಾಗ ತಾನೆ ಹೊರಗಡೆ ಬಂದಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಾಗೆ ಎಂದು ಲೇವಡಿ ಮಾಡಿದರು.
ಅಣ್ಣಾ ಹಜಾರೆ ಅವರು ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೇಳಬಹುದು, ಆದರೆ ಈ ಕಾಂಗ್ರೆಸ್ಸಿಗರು ಮಾಡಿದರೆ ಹೇಗೆ. ಹಿಂದೆ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ ಅವರ ಮೇಲೆ ಆರೋಪ ಮಾಡಿ ಕೆಳಗಿಳಿಸಿದರು. ಈಗ ಬೊಮ್ಮಾಯಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಂಗಲ್ ಹನುಮಂತಯ್ಯನವರು ಇದ್ದಾಗಲೂ ಕೂಡ ಅವರ ಮೇಲೆ ಅವರು ಆರೋಪ ಮಾಡಿದ್ದರು. ಈ ತರದ ಸಮುದಾಯಗಳ ಮೇಲೆ ಅಟ್ಯಾಕ್ ಮಾಡುವುದು ಒಂದು ಚಾಳಿ ಎಂದು ಹರಿಹಾಯ್ದರು.
ಜೋಡೋ ಅಲ್ಲ ಚೋಡೋ: ಭಾರತ್ ಜೋಡೋ ಅಲ್ಲ ಕಾಂಗ್ರೆಸ್ ಚೋಡೋ ಯಾತ್ರೆ ಶುರುವಾಗಬೇಕಿದೆ. ರಾಜಸ್ಥಾನ ಒಂದಿದೆ, ಅದು ಕೂಡ ಈಗ ಇನ್ನು ಒಂದು ವಾರದಲ್ಲಿ ಡಮರ್ ಆಗೋಗುತ್ತೆ. ಆಮೇಲಿಂದ ಕಾಂಗ್ರೆಸ್ನವರು ಭಿಕ್ಷಾಪಾತ್ರೆ ಹಿಡಿದು ಇಡೀ ದೇಶ ಸುತ್ತಬೇಕಾಗುತ್ತದೆ ಭಿಕ್ಷುಕರ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಎಂಟ್ರಿ ಯಾಗ್ತಿದ್ದಂತೆ ರಾಹುಲ್ ಗಾಂಧಿಗೆ ಗೋಬ್ಯಾಕ್ ಎನ್ನುತ್ತೇವೆ ಎಂದರು.
ಕುಮಾರಸ್ವಾಮಿ, ಸಚಿವ ಅಶ್ವತ್ಥ ನಾರಾಯಣ್ ಮೇಲೆ ಆರೋಪ ವಿಚಾರವಾಗಿ, ಅಶ್ವತ್ಥ ನಾರಾಯಣರಿಗೂ ಎಜುಕೇಶನ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯ ಆರೋಪವನ್ನು ಈ ನಾಡಿನ ಜನ ನಂಬಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಪೇ - ಸಿಎಂ ಅಭಿಯಾನದ ಗಮನ ಬೇರೆಡೆ ಸೆಳೆಯುವ ಯತ್ನ ಸರ್ಕಾರ ಮಾಡುತ್ತಿದೆ: ರಾಮಲಿಂಗಾರೆಡ್ಡಿ