ತುಮಕೂರು: ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನಕ್ಕೆ ಸೇರಿದ್ದಲ್ಲ. ಈ ದೇಶ ಭಾರತೀಯರದು. ಅಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಬದಲಾಗಿ ಅದನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ತುಮಕೂರಿನ ವಿವಿಧ ಬಡಾವಣೆಗಳಲ್ಲಿ ಕಾಲ್ನಡಿಗೆಯ ಮೂಲಕ ಮನೆಮನೆಗೆ ತೆರಳಿ ಸಿಎಎ ಕಾಯ್ದೆ ಕುರಿತು ಜನ ಜಾಗೃತಿ ಮೂಡಿಸಿದರು. ಈ ವೇಳೆ ಅಶೋಕನಗರದ ಆಜಾದ್ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕ, ಚೀನಾ, ಜಪಾನ್ ಸೇರಿ ಮುಂದುವರಿದ ದೇಶಗಳ ಸ್ಥಾನಕ್ಕೆ ಭಾರತವನ್ನು ಕೊಂಡೊಯ್ಯುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಪ್ರಪಂಚದ ಮೊದಲ ಸ್ಥಾನಕ್ಕೆ ಭಾರತ ದೇಶವನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ. ಪಾಕಿಸ್ತಾನ, ಆಫ್ಘಾನಿಸ್ತಾನದಿಂದ ಅಕ್ರಮವಾಗಿ ನುಸುಳಿ ಬಂದವರಿಗೆಲ್ಲ ದೇಶದ ಪೌರತ್ವ ಕೊಡಲು ಭಾರತ ತೋಟದಪ್ಪನ ಛತ್ರವಲ್. ಈ ದೇಶ ಭಾರತೀಯರಿಗೆ ಸೇರಿದ್ದಾಗಿದೆ ಎಂದರು.
ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಸಿಎಎ ಕಾಯ್ದೆಯಲ್ಲಿ ಏನಿದೆ ಎಂಬುದರ ತಿಳುವಳಿಕೆ ಇಲ್ಲದೆ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಭಾರತದಿಂದ ಕಾಂಗ್ರೆಸ್ ಪಕ್ಷ ಮರೆಯಾಗಲಿದೆ ಅಂತಾ ಅಶೋಕ್ ಹೇಳಿದ್ದಾರೆ.