ತುಮಕೂರು: ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಲಿದ್ದ ಸನ್ನಿವೇಶವನ್ನು ಶಮನಗೊಳಿಸಲು ಮುಂದಾದ ಪಿಎಸ್ಐ ಮೇಲೆ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಗರಂ ಆಗಿದ್ದಾರೆ.
ತುಮಕೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅವರ ಮೇಲೆ ತಾಲೂಕು ಪಂಚಾಯಿತಿ ಕಚೇರಿ ಎದುರು ಬಿಜೆಪಿ ಜಿಲ್ಲಾಧ್ಯಕ್ಷರು ಗರಂ ಆದ್ರು.
ತುಮಕೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಕಾರ್ಯಕರ್ತರೊಂದಿಗೆ ಸುರೇಶ್ ಗೌಡ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಒಂದೆಡೆ ಜೆಡಿಎಸ್ ಶಾಸಕ ಗೌರಿಶಂಕರ್ ಹಿಂಬಾಲಕರು ಮತ್ತು ಸುರೇಶ್ ಗೌಡ ಹಿಂಬಾಲಕರು ಪರಸ್ಪರ ಘೋಷಣೆ ಕೂಗುತ್ತಿದ್ದರು.
ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗುವ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಪಿಎಸ್ಐ ಮಂಜುನಾಥ್ ಸಮೀಪ ಹೋಗಿ ಸುರೇಶ್ ಗೌಡ ಅವರಿಗೆ ಮನವಿ ಮಾಡಿದ್ರು. ಈ ವೇಳೆ ಸುರೇಶ್ ಗೌಡ ಪೊಲೀಸ್ ಅಧಿಕಾರಿಯ ಮೇಲೆ ರೇಗಿದ್ದಾರೆ.
ಇದ್ರಿಂದ ಅವಮಾನಿತರಾದ ಪಿಎಸ್ಐ ಮರು ಮಾತನಾಡದೆ ದೂರ ಸರಿದಿದ್ದಾರೆ. ನಂತರ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಸುರೇಶ್ ಗೌಡ ಅವರನ್ನು ಸಮಾಧಾನಪಡಿಸಿದ್ದು, ಬಿಜೆಪಿ ಕಾರ್ಯಕರ್ತರು ಯಾವುದೇ ಸಾಮಾಜಿಕ ಅಂತರವನ್ನೂ ಕಾಪಾಡದೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.