ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಒಳಚರಂಡಿ, ನೀರು ಸರಬರಾಜು, ವಿದ್ಯುತ್ ಲೈನ್ ಅಳವಡಿಕೆಗಾಗಿ ನಗರದ ಹಲವೆಡೆ ರಸ್ತೆಗಳಲ್ಲಿ ಗುಂಡಿಗಳನ್ನು ತೆಗೆಯಲಾಗಿದೆ. ಈ ಕಾಮಗಾರಿ ಜನರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ.
ನಗರದ ಯಾವ ರಸ್ತೆಗೆ ಹೋದರೂ ಅಲ್ಲಿ ಮಣ್ಣಿನ ರಾಶಿ, ಅಗೆದ ಗುಂಡಿಗಳೇ ಕಾಣುತ್ತವೆ. ರಸ್ತೆಯಲ್ಲೆ ಮಣ್ಣಿನ ರಾಶಿ ಹಾಕುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಒಳ ಚರಂಡಿಯ ಕಾಮಗಾರಿ ಅನೇಕ ವಾರ್ಡ್ಗಳಲ್ಲಿ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗಿದೆ.
ಇನ್ನೂ ಅಂಡರ್ ಗ್ರೌಂಡ್ ವಿದ್ಯುತ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ವಿದ್ಯುತ್ ಲೈನ್ ಎಳೆಯಲಾಗಿದ್ದು, ಅವುಗಳು ಹಲವು ಕಡೆ ರಸ್ತೆಗಳಲ್ಲಿ ಹಾಗೆ ಬಿಡಲಾಗಿದೆ. ಈ ಬಗ್ಗೆ ಗಮನ ಹರಿಸದೆ ಬೆಸ್ಕಾಂ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದಂತೆ ಕಾಣುತ್ತಿದೆ.
ಇನ್ನು ಅಲ್ಲಲ್ಲಿ ಕಂಬಗಳಲ್ಲಿ ಅಳವಡಿಸಲಾಗಿರುವ ವಿದ್ಯುತ್ ಟ್ರಾನ್ಸ್ ಫಾರಂಗಳು ಮಕ್ಕಳ ಕೈಗೆ ಎಟಕುವಂತಿದ್ದು, ಅನಾಹುತ ಸೃಷ್ಟಿಸುತ್ತವೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಮುಂದಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.