ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಸಿಪ್ಸ-ಟೆಕ್-ಇಂಡಿಯಾ(ಪ್ರೈ)ಲಿಮಿಟೆಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡದೆ, ಸಂಕಷ್ಟಕ್ಕೆ ದೂಡುವ ಮೂಲಕ ಕಂಪನಿಯು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪ್ಸ್- ಆರ್.ಐ.ಸಿ ವರ್ಕರ್ಸ್ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಿಪ್ಸ್-ಟೆಕ್-ಇಂಡಿಯಾ(ಪ್ರೈ) ಲಿಮಿಟೆಡ್ ಕಂಪನಿಯಲ್ಲಿ ಕಳೆದ 13 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರಲಾಗುತ್ತಿದ್ದು, 142 ಜನ ಕಾಯಂ ನೌಕರರಿದ್ದಾರೆ. 200ಕ್ಕೂ ಹೆಚ್ಚು ಜನ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸಂಬಳ ನೀಡದೆ, ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ಸೇಡಿನ ಮನೋಭಾವದಿಂದ ಅಧಿಕಾರಿಗಳನ್ನು ಮತ್ತು ತಾತ್ಕಾಲಿಕ ಕೆಲಸಗಾರರನ್ನು ನೇಮಿಸಿಕೊಂಡು ಉತ್ಪಾದನಾ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಇದು ಕಾರ್ಮಿಕ ಕಾಯ್ದೆಯಡಿ ಅನ್ಫೇರ್ ಲೇಬರ್ ಪ್ರಾಕ್ಟೀಸ್ ಆಗಿದೆ ಎಂದು ಕಂಪನಿ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಪ್ಸ್-ಆರ್ಐಸಿ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೆ.ಸಿ ಬಸವರಾಜು, ಕಳೆದ ವರ್ಷ ನಮಗೆ 3,100 ಇಂಕ್ರಿಮೆಂಟ್ ನೀಡಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಟ್ಟದಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಇಂಕ್ರಿಮೆಂಟ್ ನೀಡಲಾಗಿದೆ. ಇವುಗಳನ್ನೆಲ್ಲ ಪ್ರಶ್ನಿಸಿದ್ದಕ್ಕೆ ನಮ್ಮನ್ನು ಹೊರಗಿಟ್ಟು ಕೆಲವರನ್ನು ಕೆಲಸಕ್ಕೆ ಸೇರಿಸಿಕೊಂಡು, ಉತ್ಪಾದನಾ ಕಾರ್ಯ ಮಾಡಲಾಗುತ್ತಿದೆ. ಇದು ಕಾರ್ಮಿಕ ವಿರೋಧಿ ಕಾಯ್ದೆಯಾಗಿದ್ದು, ಇದನ್ನು ತಡೆಯಬೇಕಿದೆ ಎಂದು ಒತ್ತಾಯಿಸಿದರು.
ಕಳೆದ 15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, 15 ರಿಂದ 16 ಸಾವಿರ ಸಂಬಳ ನೀಡಲಾಗುತ್ತಿದೆ. ಸಂಬಳ ಏರಿಕೆ ಮಾಡುವಂತೆ ಕೇಳಿದ್ದಕ್ಕೆ ನಾವು ಮಾಡುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹಠಮಾರಿ ಧೋರಣೆಯನ್ನು ಕಂಪನಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.