ತುಮಕೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ವತಿಯಿಂದ ನೂರಾರು ಆಶಾ ಕಾರ್ಯಕರ್ತೆಯರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
15 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನವನ್ನು ಒಟ್ಟಿಗೆ ನೀಡಬೇಕು, ಕನಿಷ್ಠ ವೇತನ 12,000 ರೂ ನಿಗದಿ ಮಾಡಬೇಕು, ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು ಹೀಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆ ಪದ್ಮರೇಖಾ, ನಾವು ನಿರ್ವಹಿಸುತ್ತಿರುವ ಕಾರ್ಯವನ್ನು ಆರ್ಸಿಎಚ್ ತಂತ್ರಜ್ಞಾನದ ಮೂಲಕ ಆನ್ಲೈನ್ಗೆ ಅಪ್ಲೋಡ್ ಮಾಡಬೇಕು. ಅಪ್ಲೋಡ್ ಮಾಡದಿದ್ದರೆ ಸಂಬಳ ನೀಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅಪ್ಲೋಡ್ ಮಾಡಲು ದಿನಗಟ್ಟಲೆ ನಿಲ್ಲಬೇಕಾಗುತ್ತದೆ. ಕೆಲವೊಮ್ಮೆ ಅಪ್ಲೋಡ್ ಆಗುವುದಿಲ್ಲ. ಹೀಗಾಗಿ ನಮಗೆ ಸಂಬಳ ಬರುವುದು ತಡವಾಗುತ್ತಿದೆ. ಹಾಗಾಗಿ ಆರ್ಸಿಹೆಚ್ ಗೆ ಅಪ್ಲೋಡ್ ಮಾಡುವ ಕಾರ್ಯವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಿಶ್ಚಿತ ಗೌರವಧನ ಎಂದು 12,000ರೂ ನಿಗದಿ ಮಾಡಬೇಕು.15 ತಿಂಗಳಿನಿಂದ ಬರಬೇಕಿದ್ದ ಪ್ರೋತ್ಸಾಹಧನ ಇದುವರೆಗೂ ಬಂದಿಲ್ಲ. ನಮಗೆ ನೀಡಬೇಕಿರುವ ಪ್ರೋತ್ಸಾಹ ಹಾಗೂ ಗೌರವಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.