ತುಮಕೂರು: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣ ವಿರೋಧಿಸಿ ಬೈರಗೊಂಡ್ಲು, ಬೆಲ್ಲದಹಳ್ಳಿ, ಸುಂಕದಹಳ್ಳಿ, ಕೋಳಾಲ, ಪುರದಹಳ್ಳಿ, ದಾಸರಪಾಳ್ಯದ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನಹೊಳೆ ಯೋಜನೆಯ ರೈತರ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣದ ಯೋಜನೆಯಿಂದ ಸುಮಾರು 24 ಹಳ್ಳಿಗಳಿಗೆ ತೊಂದರೆಯಾಗಲಿದೆ. ಬಫರ್ ನಿರ್ಮಾಣ ಮಾಡಬಾರದು ಎಂದು ಕಳೆದ ಐದು ವರ್ಷಗಳಿಂದ ಅಧಿಕಾರಿಗಳಿಗೆ ತಿಳಿಸುತ್ತ ಬರಲಾಗುತ್ತಿದೆ. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೂಡಾ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಕೊನೆಯ ಹಂತದ ಪ್ರತಿಭಟನೆ ಮಾಡಲು ಸಿದ್ಧರಾಗಿದ್ದೇವೆ. ರಕ್ತ ಕೊಡುತ್ತೆವೆಯೇ ಹೊರತು ಭೂಮಿಯನ್ನು ನೀಡುವುದಿಲ್ಲ. ಹಾಗಾದರೂ ನಮ್ಮ ಮನವಿಗೆ ತಿರಸ್ಕರಿಸಿ, ಬಫರ್ ಡ್ಯಾಮ್ ನಿರ್ಮಾಣ ಮಾಡಲು ಮುಂದಾದರೆ 22 ಹಳ್ಳಿಯ ಜನರ ಶವಗಳ ಮೇಲೆ ಬಫರ್ ಡ್ಯಾಮ್ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಎತ್ತಿನಹೊಳೆ ಯೋಜನೆಯ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.