ತುಮಕೂರು: ಕೋವಿಡ್ ಕಾರಣದಿಂದ ಖಾಸಗಿ ಶಾಲೆಗಳು ಮುಚ್ಚಿವೆ. ಇದರ ನೇರ ಪರಿಣಾಮ ಶಿಕ್ಷಕರ ಮೇಲಾಗಿದೆ. ಅದ್ರಲ್ಲೂ ಖಾಸಗಿ ಶಾಲಾ ಶಿಕ್ಷಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ನೆರವಿಗೆ ಬರುವಂತೆ ಸರ್ಕಾರವನ್ನು ಕೋರಿದ್ದಾರೆ.
ಖಾಸಗಿ ಶಾಲೆಗಳು ಬಂದ್ ಆಗಿರುವುದರಿಂದ ಮಕ್ಕಳ ಪೋಷಕರಿಂದ ಫೀಸ್ ಕಟ್ಟಿಸಿಕೊಳ್ಳುವಂತಿಲ್ಲ. ಮಕ್ಕಳ ಶುಲ್ಕದ ಹಣವನ್ನೇ ಆರ್ಥಿಕ ಮೂಲವನ್ನಾಗಿ ನಂಬಿರುವ ಖಾಸಗಿ ಶಾಲೆಗಳಿಗೆ ಶಿಕ್ಷಕರಿಗೆ ಸಂಬಳ ಕೊಡುವುದು ದೊಡ್ಡ ಸವಾಲು. ಬಹುತೇಕ ಶಿಕ್ಷಕರಿಗೆ ಶೇ.25 ರಷ್ಟು ಸಂಬಳ ಮಾತ್ರ ನೀಡಲಾಗ್ತಿದೆ. ಇನ್ನೂ ಹಲವು ಮಂದಿ ಆರ್ಥಿಕ ಸಮಸ್ಯೆಗೆ ಸಿಲುಕಿ ಶಿಕ್ಷಕ ವೃತ್ತಿ ತ್ಯಜಿಸಿ ಪರ್ಯಾಯ ಜೀವನ ಮಾರ್ಗ ಕಂಡುಕೊಂಡಿದ್ದಾರೆ.
ಶಾಲೆಗಳಲ್ಲಿ ಸರಿಯಾಗಿ ವೇತನ ಸಿಗದ ಕಾರಣ ಜೀವನೋಪಯಕ್ಕಾಗಿ ಶಿಕ್ಷಕರು ನರೇಗಾ ಕೆಲಸ, ಸೆಕ್ಯೂರಿಟಿ ಗಾರ್ಡ್, ಹಣ್ಣು ಹಂಪಲು, ಮಾರುವುದು ಸೇರಿದಂತೆ ಹಲವು ಪರ್ಯಾಯ ಕೆಲಸಗಳನ್ನು ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯೊಂದರಲ್ಲೇ ಸುಮಾರು 6 ಸಾವಿರಕ್ಕೂ ಅಧಿಕ ಖಾಸಗಿ ಶಾಲಾ ಶಿಕ್ಷಕರು ದುಡಿಮೆಗಾಗಿ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಈ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿದ್ದ ಉನ್ನತ ಪದವೀಧರ ಶಿಕ್ಷಕರು ಕೂಲಿ ಕೆಲಸದ ಮೊರೆ ಹೋಗುವಂತಾಗಿದೆ.
ಸರ್ಕಾರದ ನೆರವಿಗೆ ಮನವಿ
ಕೆಲವೊಂದು ಪ್ರತಿಷ್ಠಿತ ಶಾಲೆಗಳು ಕೋವಿಡ್ ಮೊದಲ ಅಲೆಯ ಸಂದರ್ಭ ಅರ್ಧ ಸಂಬಳ ಕೊಟ್ಟು ಶಿಕ್ಷಕರನ್ನು ಉಳಿಸಿಕೊಂಡಿತ್ತು. ಆದರೆ, ಎರಡನೇ ಅಲೆಯಲ್ಲಿ ಶಾಲೆಗಳ ಆಡಳಿತ ಮಂಡಳಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅರ್ಧ ವೇತನ ಕೊಡಲೂ ಸಾಧ್ಯವಾಗುತ್ತಿಲ್ಲ. ನಾಲ್ಕೈದು ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರು ಪರದಾಡುತ್ತಿದ್ದಾರೆ. ಹೀಗಾಗಿ, ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಖಾಸಗಿ ಶಾಲೆಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಮನವಿ ಮಾಡಿದ್ದಾರೆ.