ತುಮಕೂರು: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎದುರು ಖಾಸಗಿ ಡಿಪ್ಲೊಮಾ ಕಾಲೇಜುಗಳ ಬ್ಯಾನರ್ಗಳನ್ನು ಹಾಕಿ ವಿದ್ಯಾರ್ಥಿಗಳನ್ನು ಸೆಳೆದು ದಾಖಲಾತಿ ಹೆಚ್ಚಿಸಲು ಪೈಪೋಟಿ ನಡೆಯುತ್ತಿದೆ. ಜಿಲ್ಲೆಯಲ್ಲಿರುವ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿರುವ ಹಿನ್ನೆಲೆ ಖಾಸಗಿ ಕಾಲೇಜು ಸಿಬ್ಬಂದಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಬ್ಯಾನರ್ಗಳನ್ನು ಹಾಕಿ ಕುಳಿತಿದ್ದಾರೆ. ಡಿಪ್ಲೊಮಾ ಸೇರ ಬಯಸುವ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಈಗಾಗಲೇ ತುಮಕೂರು ನಗರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಹುತೇಕ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಇಲ್ಲಿ ಸೀಟು ಸಿಗದ ವಿದ್ಯಾರ್ಥಿಗಳು ಖಾಸಗಿ ಡಿಪ್ಲೊಮಾ ಕಾಲೇಜುಗಳಲ್ಲಿ ಸೇರಬಹುದು ಎಂದು ಅವರಿಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಹಾಗೂ ಕಾಲೇಜಿಗೆ ಹೊಂದಿಕೊಂಡಂತೆ ಇರುವ ಫುಟ್ಬಾತ್ನಲ್ಲಿ ಖಾಸಗಿ ಕಾಲೇಜುಗಳ ಬ್ಯಾನರ್ಗಳನ್ನು ಹಾಕಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ದಾಖಲಾತಿ ಹೆಚ್ಚಿಸಲು ಕಸರತ್ತು: ಈ ಖಾಸಗಿ ಕಾಲೇಜುಗಳಲ್ಲಿಯೇ ತೀವ್ರ ಪೈಪೋಟಿ ಇದೆ. ಸರ್ಕಾರಿ ಅನುದಾನಿತ ಕಾಲೇಜುಗಳು ಕೂಡ ಡಿಪ್ಲೊಮಾ ಸೇರ ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಮಾಹಿತಿ ನೀಡುವ ಪೈಪೋಟಿಯಲ್ಲಿ ತೊಡಗಿದ್ದಾರೆ. ತುಮಕೂರು ನಗರದಲ್ಲಿ ಒಂದು ಅನುದಾನಿತ ಡಿಪ್ಲೊಮಾ ಕಾಲೇಜು ಸೇರಿದಂತೆ 8 ಖಾಸಗಿ ಡಿಪ್ಲೊಮಾ ಕಾಲೇಜುಗಳಿವೆ.
ಅನುದಾನಿತ ಡಿಪ್ಲೊಮಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಅನುದಾನ ಕಡಿತವಾಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಕಾಲೇಜು ಸಿಬ್ಬಂದಿ ಹಾಗೂ ಪ್ರಾಧ್ಯಾಪಕರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಕುಳಿತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದಾಖಲಾತಿ ದೊರೆಯದಂತಹ ವಿದ್ಯಾರ್ಥಿಗಳು ಪಿಯುಸಿಯತ್ತ ಗಮನಹರಿಸದಂತೆ ಹಾಗೂ ಡಿಪ್ಲೊಮಾ ಕೋರ್ಸ್ ಮುಗಿದ ನಂತರ ನೇರವಾಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಾಕಷ್ಟು ಅವಕಾಶ ಲಭಿಸಲಿದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ತಮ್ಮ ಕಾಲೇಜುಗಳ ದಾಖಲಾತಿ ಹೆಚ್ಚಿಸಲು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎದುರು ಕಳೆದ 15 ದಿನಗಳಿಂದ ಕ್ಯಾಂಪ್ ಹಾಕಿ ಕುಳಿತಿದ್ದಾರೆ.
ಈ ಖಾಸಗಿ ಕಾಲೇಜುಗಳ ಸಿಬ್ಬಂದಿ ತಮ್ಮ ಕಾಲೇಜುಗಳ ಸ್ಥಿತಿಗತಿ ಹಾಗೂ ಈ ಹಿಂದಿನ ಫಲಿತಾಂಶಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತಿಳಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪಿಯುಸಿ ನಂತರ ಸಿಇಟಿ ಬರೆದು ಇಂಜಿನಿಯರಿಂಗ್ ಸೇರಬಯಿಸುವಂತಹ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಪಡೆದು ಸುಲಭವಾಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ಸುಲಭವಾಗಿ ದಾಖಲಾಗಬಹುದು ಎಂಬ ಮಾಹಿತಿ ನೀಡುತ್ತಿದ್ದಾರೆ.
ಈ ಹಿನ್ನೆಲೆ ಕೆಲ ವಿದ್ಯಾರ್ಥಿಗಳು ಡಿಪ್ಲೋಮೋ ಪದವಿ ಪಡೆಯಲು ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳ ಈ ಲೆಕ್ಕಾಚಾರವನ್ನೇ ಅರಿತಿರುವ ಖಾಸಗಿ ಕಾಲೇಜುಗಳು ಸರ್ಕಾರಿ ಕಾಲೇಜಿನ ಎದುರು ತಮ್ಮ ಕಾಲೇಜುಗಳ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಟಿಇಟಿ ಅರ್ಹತೆ ಆಧರಿಸಿ ಹಲವು ಹಲವರಿಗೆ ಗೇಟ್ಪಾಸ್: ಶಿಕ್ಷಕರ ಅಸಮಾಧಾನ