ತುಮಕೂರು : ಸರ್ಕಾರ ಖಾಸಗಿ ಬಸ್ ಮಾಲೀಕರ ಬೇಡಿಕೆಗಳಾದ ವಿಮೆ ವಿನಾಯಿತಿ ಹಾಗೂ ಮಾಸಿಕ ಕಂತಿನ ರಿಯಾಯಿತಿಯನ್ನ ನೀಡಿದರೆ ಮಾತ್ರ ಖಾಸಗಿ ಬಸ್ಗಳ ಸೇವೆ ಪುನಾರಂಭವಾಗಲಿದೆ ಎಂದು ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಲಶ್ಯಾಮಸಿಂಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಈಗಾಗಲೇ ನಮ್ಮ ಬೇಡಿಕೆಗಳನ್ನು ಪತ್ರದ ಮೂಲಕ ನೀಡಿ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ. ಸರ್ಕಾರ ಈಗಲಾದರೂ ನಮ್ಮ ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇಲ್ಲವಾದರೆ ಖಾಸಗಿ ಬಸ್ಗಳು ಸಂಚರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಸ್ ಮೇಲಿನ ತ್ರೈಮಾಸಿಕ ತೆರಿಗೆಗೆ ಡಿಸೆಂಬರ್ವರೆಗೆ ವಿನಾಯಿತಿ ನೀಡಬೇಕು ಮತ್ತು ಜೂನ್ವರೆಗೆ ಶೇಕಡಾ 50ರಷ್ಟು ತೆರಿಗೆ ಕಟ್ಟಲು ಅವಕಾಶ ನೀಡಬೇಕು. ಹಾಗೆಯೇ ಮಾಸಿಕ ಕಂತು ಹಾಗೂ ವಿಮೆಯಲ್ಲಿ ವಿನಾಯಿತಿ ನೀಡಿದರೆ ಮಾತ್ರ ಬಸ್ ಗಳು ಓಡಾಡಲು ಸಾಧ್ಯವಾಗುತ್ತದೆ ಎಂದರು.
ನಮ್ಮದು ಸೇವೆಯೊಂದಿಗೆ ದುಡಿಮೆ ಮಾಡುವ ಉದ್ಯಮವಾಗಿದ್ದು, ಕೊರೊನಾದಿಂದಾಗಿ ಜನರ ಬಳಿ ಹಣವಿಲ್ಲ. ಇಂತಹ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಿಸಿ, ಸರ್ಕಾರದ ಮಾರ್ಗಸೂಚಿಗಳಿಗೆ ಕಾರ್ಯನಿರ್ವಹಿಸುವುದು ಕಷ್ಟಕರವಾಗುತ್ತದೆ ಎಂದರು.
ರಾಜ್ಯದಲ್ಲಿ 8,500 ಖಾಸಗಿ ಬಸ್ಗಳಿವೆ. ಜಿಲ್ಲೆಯಲ್ಲಿ 540 ಬಸ್ಗಳಿವೆ. ಬಸ್ ಮಾಲೀಕರು ಪ್ರತಿಯೊಂದು ಬಸ್ನಿಂದ ಪ್ರತಿ ತಿಂಗಳು ಒಂದು ಲಕ್ಷ ರೂ. ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.