ತುಮಕೂರು : ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ವಿಶ್ವಪ್ರಸಿದ್ದ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ, ಮೊದಲಿಗೆ ಮಠದಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು.
ತುಕಮೂರಿನ ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ತೆರಳಿ ನಮಸ್ಕರಿಸಿದ ಪ್ರಧಾನಿ ಮೋದಿ ಶರಣರಂತೆ ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಸಿದ್ದಲಿಂಗ ಶ್ರೀಗಳು ಪ್ರೀತಿಯಿಂದ ಬರಮಾಡಿಕೊಂಡರು. ಇದೇ ವೇಳೆ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಬೆಳ್ಳಿಯ ಪುತ್ಥಳಿ ನೀಡಿ ಗೌರವಿಸಲಾಯಿತು.
ಇದಾದ ಬಳಿಕ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ನಮೋ ಮಾತನಾಡಿದರು. ವರ್ಷದ ಆರಂಭದಲ್ಲೇ ಪವಾಡ ಪುರುಷ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದು ಖುಷಿ ತಂದಿದೆ. ಪ್ರೇರಣಾ ಶಕ್ತಿ ಆಗಿರುವ ಸಿದ್ದಗಂಗಾ ಶ್ರೀಗಳ ವಸ್ತು ಸಂಗ್ರಹಾಲಯದ ಶಿಲಾನ್ಯಾಸ ಉದ್ಘಾಟನೆಗೆ ಆಗಮಿಸಿದ್ದು ನನ್ನ ಪುಣ್ಯ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಚರಣ ಕಮಲಗಳಿಗೆ ನಾನು ನಮಿಸುತ್ತೇನೆ. ಕೆಲವು ದಿನಗಳ ಹಿಂದೆಯಷ್ಟೇ ಉಡುಪಿಯ ಪೇಜಾವರ ಶ್ರೀಗಳು ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ. ಇಂತಹ ಮಹಾನ್ ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದುಕೊಂಡು ಹೋಗಬೇಕಾಗಿದೆ ಎಂದರು.
ಆರ್ಟಿಕಲ್ 371 ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಜನರಿಗೆ ಅವರ ಹಕ್ಕನ್ನು ನೀಡಿದ್ದೇನೆ. ಅಲ್ಲಿಯ ಜನರ ಅನಿಶ್ಚಿತತೆ ಮತ್ತು ಭಯೋತ್ಪಾದನೆಯ ಭಯವನ್ನು ದೂರ ಮಾಡಿದ್ದೇವೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣದ ವಾತಾವರಣ ನಿರ್ಮಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿಪಕ್ಷಗಳು ವಿರೋಧಿಸುತ್ತಿವೆ. ಪಾಕಿಸ್ತಾನದಲ್ಲಿ ಧರ್ಮದ ಆಧಾರದ ಮೇಲೆ ಹಿಂಸಿಸಲಾಗುತ್ತಿದೆ. ಅಲ್ಲಿಯ ಹಿಂದೂ, ಸಿಖ್, ಜೈನ್ ಭಾರತಕ್ಕೆ ಬರುತ್ತಿದ್ದಾರೆ. ಇಂದು ಜನರು ತಮ್ಮ ಧರ್ಮ, ಪ್ರಾಣ, ಹೆಣ್ಣು ಮಕ್ಕಳನ್ನು ರಕ್ಷಿಸಲು ಭಾರತಕ್ಕೆ ಆಗಮಿಸುತ್ತಿರುವ ಶರಣಾರ್ಥಿಗಳಿಗೆ ಸಹಾಯ ಮಾಡೋದು ನಮ್ಮ ಕರ್ತವ್ಯ ಎಂದರು.
ದೇಶವನ್ನು ಸಮೃದ್ಧ, ಸಕ್ಷಮ, ಸಶಕ್ತವನ್ನಾಗಿ ಮಾಡುವ ಆಕಾಂಕ್ಷೆ ಎಲ್ಲ ಜನರದ್ದಾಗಿದೆ. ಹಾಗಾಗಿ ದೇಶವನ್ನು ಸದೃಢವಾಗಿ ಮಾಡಲು ಎಲ್ಲರೂ ಒಂದಾಗಬೇಕಿದೆ. 2014ರ ಬಳಿಕ ಸಾಮಾನ್ಯ ಜನರ ಬದಲಾವಣೆ ತರಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು.