ತುಮಕೂರು: ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಅವಹೇಳನಕಾರಿಯಾಗಿ ಮಾತುಗಳನ್ನು ಆಡಿರುವುದು ಒಕ್ಕಲಿಗ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ತುಮಕೂರು ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಮುಖಂಡ ಬೋರೇಗೌಡ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಇತ್ತೀಚಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಕುರಿತಂತೆ ವಾಲ್ಮೀಕಿ ಸಮುದಾಯದವರು ಸಭೆ ಹಮ್ಮಿಕೊಂಡಿದ್ದರು. ಈ ವೇಳೆ ಪ್ರಸನ್ನಾನಂದಪುರಿ ಸ್ವಾಮೀಜಿ ದೇವೇಗೌಡರ ವಿರುದ್ದ ಕೆಟ್ಟ ಪದ ಬಳಸಿದ್ದಾರೆ. ಅವರ ಸ್ಥಾನದ ಘನತೆ ಮೀರಿ ಮಾತನಾಡಿರುವುದು ಸ್ವಾಮೀಜಿಗೆ ಶೋಭೆ ತರುವಂತಹದಲ್ಲ. ಕೂಡಲೇ ತಮ್ಮ ಮಾತನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದ್ರೆ ಸ್ವಾಮೀಜಿ ವಿರುದ್ಧ ರಾಜ್ಯದೆಲ್ಲೆಡೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘ , ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘ, ಉಪ್ಪಿನ ಕೊಳಗ ಒಕ್ಕಲಿಗರ ಸಂಘ , ಬೈರವಿ ಮಹಿಳಾ ಸಂಘ, ಕೆಂಗಲ್ ಸ್ನೇಹ ಸಮಿತಿ, ತುಮಕೂರು ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.