ತುಮಕೂರು/ಬೆಂಗಳೂರು: ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪ ಸಂಬಂಧ 11 ಮಂದಿ ಶಿಕ್ಷಕರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಲು ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿಯು ಕಳೆದ ಆಗಸ್ಟ್ 12ರಂದು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು ವಿಜಯಪುರ ಮೂಲದ ಶಿಕ್ಷಕ ಮಹೇಶ್ ಶ್ರೀಮಂತ ಸೂಸಲಾಡಿ ಎಂಬುವವರನ್ನು ಬಂಧಿಸಿದ್ದರು. ಪ್ರೌಢಶಾಲಾ ಶಿಕ್ಷಕರ ಗ್ರೇಡ್-2 ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದ್ದು, ಈ ಸಂಬಂಧ ಮಹೇಶ್ ಸೂಸಲಾಡಿಯನ್ನು ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ವೇಳೆ 2014-15 ನಡೆದ ಪ್ರೌಢಶಾಲೆ ಸಹಶಿಕ್ಷಕರ ಗ್ರೇಡ್-2 ಹಾಗೂ ಗ್ರೇಡ್-1 ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರು ಬಗ್ಗೆ ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ತುಮಕೂರು ಮೂಲದ 10 ಜನ ಶಿಕ್ಷಕರು ಹಾಗೂ ವಿಜಯಪುರದ ಶಿಕ್ಷಕ ಸೇರಿ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ತುಮಕೂರಿನ ವಿವಿಧ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿದ್ದ ಆರೋಪಿಗಳಾದ ಶಮೀನಾಜ್, ರಾಜೇಶ್ವರಿ ಜಗ್ಲಿ, ಕಮಲಾ, ನಾಗರತ್ನ, ದಿನೇಶ್, ನವೀನ್ ಹನುಮಗೌಡ, ನವೀನ್ ಕುಮಾರ್, ದೇವೇಂದ್ರ ನಾಯ್ಕ್, ಹರೀಶ್ ಆರ್, ಪ್ರಸನ್ನ ಬಿ.ಎಂ, ಮಹೇಶ ಶ್ರೀಮಂತ ಸೂಸಲಾಡಿ, ಎಂಬುವವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗಿದೆ.
ಕುಣಿಗಲ್ ಕೊಡವತಿ ಪ್ರೌಢಶಾಲೆಯ ಶಿಕ್ಷಕಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ, ತಿಪಟೂರಿನ ಆಲ್ದೂರು ಪ್ರೌಢಶಾಲೆ ಶಿಕ್ಷಕ, ನಾಗಸಂದ್ರ ಪ್ರೌಢಶಾಲೆ ಶಿಕ್ಷಕ, ಅಮೃತೂರು ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕ, ಕುಣಿಗಲ್ ಹೊಳಗೇರಿಪುರ ಪ್ರೌಢಶಾಲೆ, ತುರುವೇಕೆರೆಯ ಹುಲಿಕಲ್ ಸರ್ಕಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಕಮಲಾಪುರ ಪ್ರೌಢಶಾಲೆ, ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಸರ್ಕಾರಿ ಪ್ರೌಢಶಾಲೆ, ತಿಪಟೂರಿನ ಹುಲಿಕೆರೆ ಸರ್ಕಾರಿ ಪ್ರೌಢಶಾಲೆಯ ತಲಾ ಒಬ್ಬ ಶಿಕ್ಷಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೆಪಿಟಿಸಿಎಲ್ ಪರೀಕ್ಷೆ ಅಕ್ರಮದ ಐವರ ಜಾಮೀನು ಅರ್ಜಿ ವಜಾ.. ಮತ್ತೊಬ್ಬ ಆರೋಪಿ ಬಂಧನ