ತುಮಕೂರು: ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಪೊಲೀಸ್ ಹುತಾತ್ಮರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ, ದೇಶದ ಹಾಗೂ ನಮ್ಮ-ನಿಮ್ಮೆಲ್ಲರ ರಕ್ಷಣೆಗಾಗಿ ಜೀವ ಕಳೆದುಕೊಂಡ ಎಲ್ಲಾ ಪೋಲಿಸ್ ಹುತಾತ್ಮರಿಗೆ ಹಾಗೂ ಅವರ ಕುಟುಂಬದವರಿಗೆ ನನ್ನ ನಮನಗಳು. ಎಲ್ಲಿ ಕಾನೂನು ವ್ಯವಸ್ಥೆ ಇರುತ್ತದೆಯೋ ಅಲ್ಲಿ ಪೊಲೀಸರ ಕರ್ತವ್ಯ ಬಹಳ ಮುಖ್ಯವಾಗಿರುತ್ತದೆ.
ಪೊಲೀಸ್ ಇಲಾಖೆ ಅಚ್ಚುಕಟ್ಟಾದ ಶಿಸ್ತಿನ ಇಲಾಖೆ ಎಂದರೆ ತಪ್ಪಾಗಲಾರದು. ಎಲ್ಲಾ ಕಾಲದಲ್ಲಿಯೂ ದೇಶದ ರಕ್ಷಣೆ ಹಾಗೂ ದೇಶದ ನಾಗರಿಕರ ರಕ್ಷಣೆಗಾಗಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.