ತುಮಕೂರು: ನಕಲಿ ಎಟಿಎಂ ಕಾರ್ಡ್ ಬಳಸಿ ಎಟಿಎಂ ಮಿಷನ್ಗಳಿಂದ ಹಣ ಲಪಟಾಯಿಸಲು ವಿದೇಶಿ ವಿದ್ಯಾರ್ಥಿಗಳು ಗೂಗಲ್ ಮೊರೆ ಹೋಗಿದ್ದರು ಎಂಬುದನ್ನು ನಂಬಲು ಅಸಾಧ್ಯವಾದ್ದರೂ ಸತ್ಯವಾಗಿದ್ದು, ಇಂತಹದ್ದೊಂದು ವಿದೇಶಿ ವಿದ್ಯಾರ್ಥಿಗಳ ವ್ಯವಸ್ಥಿತ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಫಿಸಿಯೋ ಥೆರಪಿಸ್ಟ್ ವಿದ್ಯಾಭ್ಯಾಸ ಮಾಡಲು ಸ್ಟೂಡೆಂಟ್ ವಿಸಾ ಪಡೆದು ದೆಹಲಿಯಲ್ಲಿ ವಾಸವಾಗಿದ್ದ ಉಗಾಂಡಾದ ಐವಾನ್ ಕಾಂಬೋಗೆ ಮತ್ತು ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಕೀನ್ಯಾದ ನೈರೋಬಿಯ ಲಾರೆನ್ಸ್ ಮುಕಾಮು ಎಂಬ ಆರೋಪಿಗಳು ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕಳ್ಳತನ ಮಾಡುತ್ತಿದ್ದರು. ಇವರ ಜೊತೆಗೆ ಇನ್ನಿಬ್ಬರು ಆರೊಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಈ ವಂಚಕರು ಎಟಿಎಂ ಸ್ಕಿಮ್ಮಿಂಗ್ ಮಷಿನ್ ಬಳಸಿ ನಕಲಿ ಎಟಿಎಂ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಿದ್ದರು. ನೂತನ ತಂತ್ರಜ್ಞಾನ ಹೊಂದಿರುವ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವಂಚಕರು ಸ್ಕಿಮ್ಮಿಂಗ್ ಮಷಿನ್ ಅಳವಡಿಸುವಂತಹ ಹಳೆ ತಂತ್ರಜ್ಞಾನವನ್ನು ಹೊಂದಿರುವ ಎಟಿಎಂ ಮಷಿನ್ಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಓದಿ: ತುಮಕೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರ ಮೇಲೆ ಕರಡಿ ದಾಳಿ
ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ನಕಲಿ ಎಟಿಎಂ ಕಾರ್ಡ್ ಬಳಸಿ ಮತ್ತು ಜನರಿಗೆ ಮೋಸ ಮಾಡಿ ಬೇರೆ ಬೇರೆ ಕಡೆಯಿಂದ ಖದೀಮರು ಕಳ್ಳತನ ಮಾಡಿದ್ದಾರೆ. ಈ ಕುರಿತು ನವೆಂಬರ್ನಿಂದ ಡಿಸೆಂಬರ್ವರೆಗೆ ಸುಮಾರು 60 ಪ್ರಕರಣಗಳು ದಾಖಲಾಗಿದೆ.
ಇದರಲ್ಲಿ 10 ಬ್ಯಾಂಕ್ಗಳಿಗೆ ಸಂಬಂಧಿಸಿದ ಪ್ರಕರಣಗಳಿದ್ದು, ಮುಖ್ಯವಾಗಿ ಕುಣಿಗಲ್, ಭೀಮಸಂದ್ರ, ನಿಟ್ಟೂರು ಈ ಮೂರು ಕಡೆಗಳಲ್ಲಿ ಮತ್ತು ಬೇರೆ ಬೇರೆ ಬ್ಯಾಂಕ್ಗಳಲ್ಲಿಯೂ ಖದೀಮರು ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಬಳಸಿ ಹಣ ಕದ್ದಿದ್ದಾರೆ.
ಗೂಗಲ್ ಸರ್ಚ್ಗೆ ಮೊರೆ ಹೋದ ಖದೀಮರು:
ಈ ಆರೋಪಿಗಳು ಕಳ್ಳತನ ಮಾಡಲು ಗೂಗಲ್ ಮೊರೆ ಹೋಗಿದ್ದು, ಗೂಗಲ್ನಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸುವಂತಹ ಹಳೆ ತಂತ್ರಜ್ಞಾನ ಹೊಂದಿರುವ ಎಟಿಎಂ ಮಷಿನ್ಗಳನ್ನು ಸರ್ಚ್ ಮಾಡಿದ್ದಾರೆ. ಈ ವೇಳೆ ಜಿಲ್ಲೆಯ ಕುಣಿಗಲ್, ಭೀಮಸಂದ್ರ, ನಿಟ್ಟೂರು ಪ್ರದೇಶದಲ್ಲಿ ಈ ರೀತಿಯ ಎಟಿಎಂ ಇರುವುದನ್ನು ಖಚಿತಪಡಿಸಿಕೊಂಡು ಕಳ್ಳತನ ಮಾಡಲು ಮುಂದಾಗಿದ್ದರು ಎನ್ನಲಾಗುತ್ತಿದೆ.
ಇದು ಅಂತಾರಾಜ್ಯ ಗ್ಯಾಂಗ್ ಆಗಿದ್ದು, ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ಬೆಂಗಳೂರು, ಚೆನ್ನೈ, ದೆಹಲಿ,ಬಾಂಬೆ, ವೆಲ್ಲೂರು, ಸೇರಿದಂತೆ ವಿವಿಧ ಎಟಿಎಂನಲ್ಲಿ ಹಣ ಡ್ರಾ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದರು.
ಬಂಧಿತ ಆರೋಪಿಗಳಿಂದ ಸುಮಾರು 25 ಲಕ್ಷಕ್ಕೂ ಅಧಿಕ ನಗದು, 20 ನಕಲಿ ಎಟಿಎಂ ಕಾರ್ಡ್ಗಳು, ಸ್ಕಿಮ್ಮಿಂಗ್ ಮಷಿನ್ ಹಾಗೂ ದೆಹಲಿ ನೋಂದಣಿಯ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.