ತುಮಕೂರು : ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರು ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಉರಿಯುವ ಸೂರ್ಯನ ಆರ್ಭಟದಿಂದ ನೆಲಕ್ಕೆ ಕಾಲಿಟ್ಟರೆ ಕೆಂಡವೇ ನೆಲವಾಗಿದೆಯೇನೋ ಎಂಬ ಅನುಭವ. ಮನೆಯಲ್ಲಿ ಕೂತರೆ ಸೆಕೆ, ಇಂಥ ಪರಿಸ್ಥಿತಿಯಲ್ಲಿ ಒಡಲನ್ನ ತಣ್ಣಗಿರಿಸಲು ಜನರು ಬಡವರ ಫ್ರಿಡ್ಜ್‌ಗಳಿಗೆ ಮೊರೆ ಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಫ್ರಿಡ್ಜ್ ಇದ್ದರೆ ಸದಾ ತಣ್ಣನೆಯ ನೀರು ಕುಡಿಯಲು ಸಾಧ್ಯ. ಆದರೆ, ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇಲ್ಲದೇ ಇರೋದರಿಂದ ತಣ್ಣನೆ ನೀರು ಸಿಗುವುದು ಕಷ್ಟ. ಇದನ್ನರಿತ ಜನರು ಬಡವರ ಫ್ರಿಡ್ಜ್ ಎಂದೇ ಹೆಸರು ಗಳಿಸಿರುವ ಮಣ್ಣಿನ ಮಡಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಕಮ್ಮಿಯಾಗಿದೆಯಾದರೂ ಬೇಸಿಗೆಯಲ್ಲಿ ಮಾತ್ರ ಇವುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬರುತ್ತದೆ.
ಈಗ ನಗರಗಳಲ್ಲೂ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದಕ್ಕಾಗಿ ಇವುಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಬೇಸಿಗೆಯಲ್ಲಿ ಮಡಿಕೆಗಳಲ್ಲಿ ನೀರಿಟ್ಟರೆ ತುಂಬಾ ತಣ್ಣಗೆ ಇರುತ್ತವೆ. ಅಲ್ಲದೆ ಮಡಿಕೆ ನೀರು ಆರೋಗ್ಯಕ್ಕೂ ಉತ್ತಮ. ಈ ಎಲ್ಲಾ ಅಂಶಗಳಿಂದ ಜನರು ಮಡಿಕೆಗಳತ್ತ ಮುಖ ಮಾಡಿದ್ದಾರೆ.
ನಗರದ ಹೊರಪೇಟೆ, ಅಂತರಸನಹಳ್ಳಿ, ಹಳೆ ಮಾರುಕಟ್ಟೆ ಪ್ರದೇಶಗಳಲ್ಲಿ ಮಣ್ಣಿನ ಮಡಕೆಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಬಿಸಿಲಿನ ಬೇಗೆಗೆ ತತ್ತರಿಸಿರುವ ಜನರು ಮಡಿಕೆ ಅಂಗಡಿಗಳತ್ತ ಬಂದು ತಮಗೆ ಬೇಕಾದ ಮಡಿಕೆ ಕೊಂಡುಕೊಳ್ಳುತ್ತಿದ್ದಾರೆ. ಕಳೆದ ಬಾರಿಗಿಂತ ವ್ಯಾಪಾರ ಸ್ವಲ್ಪ ಜೋರಾಗಿದೆ. ಮಡಿಕೆಗಳ ಆರಂಭದ ಬೆಲೆ 120 ರೂ. ನಿಂದ 400 ರೂ. ವರೆಗೂ ಇದೆ. ಈ ಬಾರಿ ಮಣ್ಣಿನಿಂದ ತಯಾರಿಸಿದ ವಾಟರ್ ಕ್ಯಾನ್‌ಗಳು ಜನರನ್ನ ಆಕರ್ಷಿಸುತ್ತಿವೆ.
ಬೇಸಿಗೆ ಕಾಲದಲ್ಲಿ ವರ್ಷದಿಂದ ವರ್ಷಕ್ಕೆ ಮಡಿಕೆಗಳ ಬೇಡಿಕೆ ಹೆಚ್ಚಾಗಿದೆ. 10 ಲೀಟರ್ ನೀರು ಹಿಡಿಯುವ ಮಡಿಕೆಯಿಂದ ಹಿಡಿದು 30 ಲೀಟರ್ ಸಾಮರ್ಥ್ಯದ ಮಡಿಕೆಗಳನ್ನೂ ಮಾರಾಟ ಮಾಡಲಾಗುತ್ತಿದೆ. ಜನರು ಕೂಡ ಹೆಚ್ಚು ಮಡಿಕೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ರವಿ ಮಲ್ಲಣ್ಣ.