ತುಮಕೂರು: ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರಸ್ತುತ ಶಾಲಾ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ದಾಖಲಾತಿಗಾಗಿ ಮುಗಿಬೀಳುತ್ತಿದ್ದಾರೆ. ಅದರಲ್ಲೂ ದೂರದ ಉತ್ತರ ಕರ್ನಾಟಕ ಭಾಗದ ಪೋಷಕರು ತಮ್ಮ ಮಕ್ಕಳನ್ನು ಮಠದಲ್ಲಿ ವಿದ್ಯಾಭ್ಯಾಸಕ್ಕಾಗಿ ದಾಖಲು ಮಾಡಲು ಬಂದು ಕಾದು ಕುಳಿತುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಮಠದ ವತಿಯಿಂದ ಪ್ರತಿ ವರ್ಷ 10,000 ಮಕ್ಕಳಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣದ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನೂ ಮೀರಿ ಹೆಚ್ಚುವರಿ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ವಸತಿ ಸಮಸ್ಯೆ. 8 ಮತ್ತು 9 ನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದು ಮಠದ ಆಡಳಿತ ಮಂಡಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಹೀಗಾಗಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮಠದ ಆಡಳಿತ ವರ್ಗ ಚಿಂತನೆ ನಡೆಸುತ್ತಿದೆ.
ಗದಗ, ಬೀದರ್, ಕೊಪ್ಪಳ, ಬಾಗಲಕೋಟೆ, ಹಾವೇರಿ, ಬೆಳಗಾಂ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಬಡ ಮಕ್ಕಳಿಗೆ ಮಠದಲ್ಲಿ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಸದುದ್ದೇಶದಿಂದ ಶ್ರೀ ಶಿವಕುಮಾರ ಸ್ವಾಮೀಜಿ ಇಂಥದ್ದೊಂದು ಮಹೋನ್ನತ ವ್ಯವಸ್ಥೆ ಕಲ್ಪಿಸಿದ್ದರು. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಮಠದ ವತಿಯಿಂದ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ಪೂರಕ ಮೂಲ ಸೌಲಭ್ಯ ದೊರೆಯಬೇಕು ಎಂಬ ಆಶಯ ವ್ಯಕ್ತಪಡಿಸಿದೆ. ಇದಕ್ಕಾಗಿ ಮಠದ ಆವರಣದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಇನ್ನೂ ಪ್ರಾರಂಭವಾಗದಿರುವ ಕಾಮಗಾರಿಗಳ ಮರುಪರಿಶೀಲನೆಗಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ಅದರಲ್ಲಿ 9.90 ಕೋಟಿ ರೂ. ವೆಚ್ಚದ ಸಿದ್ದಗಂಗಾ ಮಠದ ವಸತಿ ನಿಲಯದ ಕಾಮಗಾರಿಯೂ ಸೇರಿದೆ. ಈ ಕಾಮಗಾರಿಯ ತಾಂತ್ರಿಕ ಬಿಡ್ ತೆರೆಯಲಾಗಿತ್ತು. ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದುವರೆಸುವ ಬಗ್ಗೆ ಇಲಾಖೆ ಸಲ್ಲಿಸಿದ ಮನವಿ ಪರಿಶೀಲಿಸಿದ ಮುಖ್ಯಮಂತ್ರಿಗಳು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಂದುವರೆಸುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದಾರೆ.
ಇನ್ನೊಂದೆಡೆ, ಮಠದಲ್ಲಿ ವಿದ್ಯಾಭ್ಯಾಸ ಮಾಡಿದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಲಭಿಸಲಿದೆ ಎಂಬುದು ಪೋಷಕರ ಹಂಬಲ. ಹೀಗಾಗಿ ಮಠದಲ್ಲಿ ಮಕ್ಕಳಿಗೆ ದಾಖಲಾತಿ ಕೊಡುವಂತೆ ಸ್ವಾಮೀಜಿ ಬಳಿ ದುಂಬಾಲು ಬೀಳುತ್ತಿದ್ದಾರೆ.
ಇದನ್ನೂ ಓದಿ: 632 ಪಿಯು ಕಾಲೇಜುಗಳ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ