ತುಮಕೂರು: ನಾವು ತಪ್ಪು ಮಾಡಿದ್ದರೆ ಹೆದರಬೇಕು. ತಮ್ಮ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ ಮಾಡಿದ್ದು ಸಂತೋಷ ಎಂದಿರುವ ಮಾಜಿ ಡಿಸಿಎಂ ಜಿ ಪರಮೇಶ್ವರ್, ತಾವು ಕಾನೂನು ವಿರುದ್ಧವಾಗಿ ವಹಿವಾಟು ನಡೆಸಿದ್ದರೆ, ಐಟಿ ದಾಳಿಯ ಭಾಗವಾಗುತ್ತೇವೆ ಎಂದಿದ್ದಾರೆ.
ಈ ಸಂಬಂಧ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಮಾತನಾಡಿದ ಅವರು, ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಿ ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಯನ್ನು ಹೊರಹಾಕಲಿ ಎಂದು ಅವರು ಐಟಿ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಇಲಾಖೆ ಹೀಗೆ ಮಾಡುವುದರಿಂದ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.