ತುಮಕೂರು : ಮುಕ್ತ ಮತ್ತು ನ್ಯಾಯಸಮ್ಮತ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿದೆ. ಆದರೆ, ಜಿಲ್ಲೆಯ 33 ಗ್ರಾಮಗಳ ಮತದಾರರು ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯತ್‌ಗಳ ಒಟ್ಟು 33 ಗ್ರಾಮಗಳ ಮತದಾರರು ಹಾಗೂ ಉಮೇದುವಾರಿಕೆ ಸಲ್ಲಿಸುವ ಆಕಾಂಕ್ಷಿಗಳು ಒಕ್ಕೊರಲಿನ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಗ್ರಾಮಸ್ಥರ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ ತಾಲೂಕು ಆಡಳಿತದ ಪ್ರಯತ್ನ ಫಲ ನೀಡಿಲಿಲ್ಲ.
ಎರಡು ದಿನಗಳಿಂದ ನಿರಂತರ ಸಭೆಗಳನ್ನು ನಡೆಸಿದ ಗ್ರಾಮಸ್ಥರು ಕುಡಿಯುವ ನೀರಿನ ಯೋಜನೆಗೆ ಚಾಲನೆ ಸಿಕ್ಕ ನಂತರವೇ ಅಧಿಕಾರಿಗಳು ಚುನಾವಣೆ ನಡೆಸಲಿ ಎಂಬ ನಿರ್ಧಾರಕ್ಕೆ ಬದ್ದರಾಗಿದ್ದಾರೆ.
ಓದಿ: ರಾಸುಗಳನ್ನು ಆರ್ಎಸ್ಎಸ್, ಬಿಜೆಪಿಯವರು ಸಾಕಲ್ಲ : ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ಟೀಕೆ
20 ವರ್ಷಗಳಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನೀರಿಗಾಗಿ ಅನೇಕ ಹೋರಾಟಗಳನ್ನು ಮಾಡಿ ಬೇಸತ್ತು ಹೋಗಿರೋ ಈ ಭಾಗದ ಜನರು ಇದೀಗ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ನಿರ್ಧಾರ ಮಾಡಿದ್ದಾರೆ. ನೀರು ಹರಿಸುವವರೆಗೂ ಚುನಾವಣೆ ನಡೆಸಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
20 ವರ್ಷಗಳ ನಿರಂತರ ಹೋರಾಟದ ಫಲವಾಗಿ ಮಠ ಕೆರೆಗೆ ನೀರು ಹರಿಸುವ ಯೋಜನೆಗೆ ಮೂರು ಬಾರಿ ಕ್ರಿಯಾಯೋಜನೆ ಸಿದ್ಧವಾಗಿತ್ತು. ಒಮ್ಮೆ 13 ಕೋಟಿ ರೂ. ಮತ್ತೊಮ್ಮೆ 16 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ಭರವಸೆಯಾಗಿಯೇ ಉಳಿದ ಹಿನ್ನೆಲೆ ಮತ್ತೆ ನಿರಂತರ ಹೋರಾಟ ನಡೆಸಲಾಗಿತ್ತು.
ಅದರ ಫಲ 2019ರಲ್ಲಿ ದೊರೆತಿತ್ತು. ಆಗ 25.65 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ದೊರಕಿದ್ರೂ ಕಾಮಗಾರಿ ಆರಂಭಕ್ಕೆ ನೂರೆಂಟು ವಿಘ್ನ ಮುಂದಿಟ್ಟು ಹೇಮಾವತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮರೆಯಾಗಿದ್ದಾರೆ.
ಬಹು ವರ್ಷದ ಕನಸಾಗಿರುವ ಮಠ ಕೆರೆಗೆ ನೀರು ಹರಿಸಲು ಸರ್ಕಾರದ ಬಳಿ 25 ಕೋಟಿ ರೂ.ಗಳು ಇಲ್ಲದಿರುವುದು ವಿಪರ್ಯಾಸ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಬರಪೀಡಿತ ಪ್ರದೇಶವಾಗಿರುವ ಹಾಗಲವಾಡಿ ಹೋಬಳಿ ಸಂಪೂರ್ಣ ಶಾಪಗ್ರಸ್ತ ಪ್ರದೇಶವಾಗಿದೆ. ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಈ ಭಾಗದ ಮತಗಳನ್ನು ಮಾತ್ರ ಬಯಸುವ ಜನಪ್ರತಿನಿಧಿಗಳು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
ಮಠದಹಳ್ಳ ಕೆರೆ, ಶೇಷೇನಹಳ್ಳಿ ಕೆರೆ ಹಾಗೂ ಕುರುಬರಹಳ್ಳಿ ಕೆರೆಗೆ ನೀರು ಹರಿಸಿದಲ್ಲಿ ಇಡೀ ಹೋಬಳಿಯು ಚೇತರಿಕೆ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಅಧಿಕಾರಿಗಳಿಗೂ ತಿಳಿದಿದೆ. ಆದರೂ ನಮ್ಮ ಕೆರೆಗಳ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಮತ್ತು ಆಕಾಂಕ್ಷಿಗಳು ಒಗ್ಗಟ್ಟಾಗಿ ನಿರ್ಧರಿಸಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.