ತುಮಕೂರು: ರೈತ ವಿರೋಧಿ ಕರ್ನಾಟಕ ಭೂ ಸುಧಾರಣೆಗಳ ಕಾಯ್ದೆ-2020 ಅನ್ನು ಹಿಂಪಡೆಯಬೇಕು. ಇದರ ಜೊತೆಗೆ ಪೆಟ್ರೋಲ್ ,ಡೀಸೆಲ್ ದರ ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರ್ಕಾರ ಘೋಷಿಸಿದ ನಾಲ್ಕು ಹಂತಗಳ ಲಾಕ್ ಡೌನ್ ಗೆ ರಾಜ್ಯದ ಜನತೆ ಸಂಪೂರ್ಣವಾಗಿ ಸಹಕಾರ ನೀಡಿದ್ದು, ಅದನ್ನು ಯಶಸ್ವಿಗೊಳಿಸಿದ್ದಾರೆ. ಈ ಹೋರಾಟದಲ್ಲಿ 76 ದಿನಗಳಲ್ಲಿ ಜನತೆ ದುಡಿಮೆ, ವ್ಯಾಪಾರ ಇಲ್ಲದೇ ಸಂಪಾದನೆ ಶೂನ್ಯವಾಗಿದ್ದು, ಆಹಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಈಗ ವಿದ್ಯುತ್ ಬಿಲ್ ದುಪ್ಪಟ್ಟು ಮಾಡಿ, ಜನರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುವಂತಾಗಿದೆ. ಹಾಗಾಗಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಬಿಲ್‌ಗೆ ಸಂಬಂಧಿಸಿದಂತೆ ಅತ್ಯಂತ ದುಬಾರಿ ಶುಲ್ಕವನ್ನು ಸರ್ಕಾರ ನಿಗದಿ ಪಡಿಸಿದ್ದು, ಇದನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ರೈತ ವಿರೋಧಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 2020 ಹಿಂಪಡೆಯಬೇಕು. ಈ ಕಾಯ್ದೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಯೋಜನೆ ಉಪಯೋಗವಾಗಲಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.