ತುಮಕೂರು: ಮನುಷ್ಯ ಬದುಕಲು ಜನ, ಜಲ, ಜಮೀನು, ಜಾನುವಾರು, ಜಂಗಲ್ ಎಂಬ ಜ ಅಕ್ಷರದ ಐದು ಅಂಶಗಳು ಬೇಕು. ಈ ಜ ಎಂಬ ಅಕ್ಷರದ ಪದಗಳು ಮನುಷ್ಯ ಬದುಕಲು ಬೇಕಿರುವ ಸರಪಳಿಯ ಹಾಗೆ ಎಂದು ಸಾವಯವ ಕೃಷಿ ಪರಿವಾರದ ಕಾರ್ಯಕರ್ತ ಅರುಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಿಸಾನ್ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಸಾವಯವ ಕೃಷಿಕರ ಸಮ್ಮೇಳನವನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಕೃಷಿಯಲ್ಲಿ ಬದಲಾವಣೆ ಕಾಣಬೇಕಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಸಿಂಪಡಿಸುವ ಔಷಧ ಕೇವಲ ಮಣ್ಣು ಮಾತ್ರ ಹಾಳುಮಾಡುವುದಿಲ್ಲ, ಅದರ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತದೆ. ಸಾವಯವ ಕೃಷಿಯಲ್ಲಿ ಹಣ ದೊರೆಯುವುದಿಲ್ಲ, ಆದರೆ ಆರೋಗ್ಯ ದೊರೆಯುತ್ತದೆ ಎಂದರು.
ಮನುಷ್ಯ ಸಂಘಜೀವಿ ಹಾಗಾಗಿ ಜನ ಬೇಕು, ಬದುಕಲು ನೀರು, ಆಹಾರ ಬೇಕು. ಆಹಾರ ಬೆಳೆಯಲು ಜಮೀನು ಬೇಕು, ಜಮೀನಿನಲ್ಲಿ ಉಳುಮೆ ಮಾಡಲು ಗೊಬ್ಬರಕ್ಕಾಗಿ ಜಾನುವಾರು ಬೇಕು. ಅದೇ ರೀತಿ, ಮಳೆ ಬರಲು ಅರಣ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇವೆಲ್ಲವೂ ಒಂದು ರೀತಿಯ ಸರಪಳಿಯ ಮೂಲಕ ಮನುಷ್ಯನ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತವೆ ಎಂದರು.
ಸಾವಯವ ಕೃಷಿಕರಿಗೆ ಗೊಂದಲ ಇರಬಾರದು. ಆರೋಗ್ಯ ಬೇಕೆಂದರೆ ಸಾವಯವ ಕೃಷಿಯನ್ನು ಆಧರಿಸಿ. ಆದಾಯ ಗಳಿಕೆ ಹೆಚ್ಚಾಗಬೇಕಾದರೆ ಕೃಷಿಯಲ್ಲಿ ರಾಸಾಯನಿಕ ಸಿಂಪಡನೆ ಮಾಡಬಹುದು. ಎರಡೂ ಸಹ ನಿಮ್ಮ ಅರಿವಿಗೆ ಬಿಟ್ಟದ್ದು. ಇತ್ತೀಚಿಗೆ ಕೆಲವೊಂದು ಆಹಾರ ಪದಾರ್ಥಗಳು ವಿನಾಶದ ಅಂಚಿಗೆ ತಲುಪುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.