ತುಮಕೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲು ಪೂರಕವಾಗಿ ವೈದ್ಯಕೀಯ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. 450ಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ದತೆ ನಡೆಸಿದೆ.
ಜಿಲ್ಲಾ ಮಟ್ಟದಲ್ಲಿ ತುಮಕೂರು ನಗರದ ಕ್ಯಾತಸಂದ್ರ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ಸುಮಾರು 400 ಹಾಸಿಗೆಯುಳ್ಳ ವಾರ್ಡ್ ತೆರೆಯಲಾಗುತ್ತಿದೆ. ಚಿಕಿತ್ಸೆಗೆ ಅಗತ್ಯ ಇರುವ ಎಲ್ಲ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಅಲ್ಲದೇ ಕ್ರೀಡಾ ಸಮುಚ್ಚಯದ ಪಕ್ಕದಲ್ಲೇ ಇರುವ ಎಸ್ಸಿ- ಎಸ್ಟಿ ಹಾಸ್ಟೆಲ್ ನಲ್ಲಿ ಮಹಿಳಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕ್ರೀಡಾ ಸಮುಚ್ಚಯದ ವಾರ್ಡ್ ಹಾಗೂ ಹಾಸ್ಟೆಲ್ ವಾರ್ಡ್ನಲ್ಲಿ ಸೋಂಕಿತರನ್ನು ಶಿಪ್ಟ್ ಮಾಡುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಮತ್ತು ನರ್ಸ್ಗಳ ಸೇವೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿನ ಈ ರೀತಿಯ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಜಾಗೃತಿ ವಹಿಸುತ್ತಿದೆ. ಅಲ್ಲದೇ ಜನರಲ್ಲಿರುವ ಆತಂಕವನ್ನು ದೂರ ಮಾಡುವ ಮೂಲಕ ತುಮಕೂರು ಜಿಲ್ಲಾಡಳಿತ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸಿದ್ದತೆ ನಡೆಸಿದೆ.