ತುಮಕೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಡಿ. 9ರಂದು ಬಾರಕೋಲು ಚಳುವಳಿಯನ್ನು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ನಡೆಸಿ, ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನು ತರುವ ಮೂಲಕ ರೈತರನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಕಾರ್ಯ ಮಾಡುತ್ತಿದೆ. ರೈತ ವಿರೋಧಿ ಕಾನೂನು ವಿರೋಧಿಸಿ ದೇಶದ ಎಲ್ಲಾ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಕೇಂದ್ರ ಸರ್ಕಾರ ರೈತರನ್ನು ಅಮಾನುಷವಾಗಿ ನಡೆಸಿಕೊಳ್ಳುವ ಮೂಲಕ ಸೈನಿಕರಿಂದ ರೈತರ ಮೇಲೆ ಲಾಠಿಚಾರ್ಜ್ ಮಾಡಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ರೈತರು ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್ ಬೆಂಬಲ: ಡಿಕೆಶಿ
ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುವ ರೀತಿ ಇದೇನಾ? ಭಾರತ ದೇಶದ ಮಾನವೀಯ ಮೌಲ್ಯಗಳು ನಿಮಗೆ ತಿಳಿದಿದೆಯೇ ಎಂದು ಬಿಜೆಪಿಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಮಾನವೀಯ ಮೌಲ್ಯಗಳು ಹರಾಜಾಗುತ್ತಿವೆ. ಕೇಂದ್ರದ ಮಾನವ ಹಕ್ಕುಗಳ ಆಯೋಗ ರೈತರ ಹಾಗೂ ಕೇಂದ್ರ ಸರ್ಕಾರದ ನಡುವೆ ಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನು ವಿರೋಧಿಸಿ ನಾಳೆ ತುಮಕೂರು ಜಿಲ್ಲೆಯ 10 ತಾಲೂಕುಗಳು ಸೇರಿದಂತೆ ನಗರ ಭಾಗದಲ್ಲಿಯೂ ಬಂದ್ ಮಾಡಲಾಗುವುದು ಎಂದರು.