ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂಸೇವಕರು ಗಣ ವೇಷಧಾರಿಗಳಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ್ದಾರೆ.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತುಮಕೂರು ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗದ ಶಿಬಿರ ನಡೆಯಿತು. ಈ ಶಿಬಿರದ ಕಡೆಯ ದಿನವಾದ ನಿನ್ನೆ ಪಟ್ಟಣದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
ಎಂ.ಪಿ.ಎಸ್ ಶಾಲಾ ಆವರಣದಲ್ಲಿ ಸಂಘದ ಪ್ಯಾಂಟ್, ಬೆಲ್ಟ್, ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು 200ಕ್ಕೂ ಹೆಚ್ಚು ಗಣವೇಷಧಾರಿಗಳು ಸಮಾವೇಶಗೊಂಡರು. ನಂತರ ಧ್ವಜಾರೋಹಣ ನಡೆದು ಧ್ವಜವಂದನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಪಥಸಂಚಲನ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿಯಲು ಶುರುವಾಯಿತು. ಶಿಸ್ತಿನ ಸಿಪಾಯಿಗಳಂತಿದ್ದ ಗಣವೇಷಧಾರಿಗಳು ಸುರಿಯುವ ಮಳೆಯಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡರು.
ಮಾರ್ಗದುದ್ದಕ್ಕೂ ಗಣವೇಷಧಾರಿಗಳ ಭಾರತಮಾತಾ ಜಯಘೋಷ ಹಾಗೂ ಸಾಂಪ್ರದಾಯಿಕ ವಾದ್ಯ ಮೇಳ ಗಮನಸೆಳೆಯಿತು. ಸಾರ್ವಜನಿಕರು ಭಾರತಮಾತೆಯ ಭಾವಚಿತ್ರ, ಭಗವಧ್ವಜ ಹಾಗೂ ಸ್ವಯಂಸೇವಕರ ಮೇಲೆ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪಥಸಂಚಲನದ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.